ಚೆನ್ನೈ (ತಮಿಳುನಾಡು): ಕೇವಲ ರೀಲ್ನಲ್ಲಿ ಮಾತ್ರವಲ್ಲ, ನೈಜ ಜೀವನದಲ್ಲೂ ಹೀರೋ ಆಗಿರಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ ಮಾತು ನನ್ನನ್ನು ನೋಯಿಸಿದೆ ಎಂದು ತಮಿಳು ನಟ ಇಳಯದಳಪತಿ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಆಮದು ಸುಂಕವನ್ನು ಕಟ್ಟಿದ್ದರೂ ಕೂಡ ಪ್ರವೇಶ ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ಪ್ರವೇಶ ತೆರಿಗೆಯನ್ನು ವಿಧಿಸದಂತೆ ತಡೆಯಾಜ್ಞೆಯನ್ನು ಕೋರಿ ಮದ್ರಾಸ್ ಹೈಕೋರ್ಟ್ನಲ್ಲಿ ಕೆಲ ತಿಂಗಳ ಹಿಂದೆ ವಿಜಯ್ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಜಾಗೊಳಿಸಿದ್ದ ಜಡ್ಜ್ ಎಸ್.ಎಂ.ಸುಬ್ರಮಣ್ಯಂ ಅವರು ನಟರು ತಮ್ಮ ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಕೇವಲ ರೀಲ್ನಲ್ಲಿ ಮಾತ್ರವಲ್ಲ, ನೈಜ ಜೀವನದಲ್ಲೂ ಹೀರೋ ಆಗಿರಬೇಕು ಎಂದು ಸಲಹೆ ನೀಡಿ 1 ಲಕ್ಷ ರೂ. ದಂಡ ಪಾವತಿಸಲು ಸೂಚಿಸಿತ್ತು.
2012ರಲ್ಲಿ ಇಂಗ್ಲೆಂಡ್ನಲ್ಲಿ ಐಷಾರಾಮಿ ಕಾರೊಂದನ್ನು ಆಮದು ಮಾಡಿಕೊಂಡಿದ್ದಕ್ಕೆ ವಿಜಯ್ಗೆ ದಂಡ ವಿಧಿಸಲಾಗಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಇಂದು ನ್ಯಾಯಮೂರ್ತಿಗಳಾದ ಪುಷ್ಪಾ ಸತ್ಯನಾರಾಯಣ ಮತ್ತು ಮೊಹಮ್ಮದ್ ಶಫೀಕ್ ಅವರ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿತು.
ಇದನ್ನೂ ಓದಿ: ಅತ್ಯುತ್ತಮ ನಟನೆಗೆ ಕಂಗನಾ, ಧನುಷ್, ಮನೋಜ್ಗೆ ಅವಾರ್ಡ್: ತಲೈವಾಗೆ ಫಾಲ್ಕೆ ಪ್ರಶಸ್ತಿ ಪ್ರದಾನ
ಈ ವೇಳೆ ವಾದ ಮಾಡಿದ ನಟನ ಪರ ವಕೀಲ ವಿಜಯ್ ನಾರಾಯಣ್ ಅವರು, 20 ವರ್ಷಗಳಿಂದ ದೇಶದಲ್ಲಿ ಪ್ರವೇಶ ತೆರಿಗೆ ಸಮಸ್ಯೆ ಕಂಡು ಬರುತ್ತಿದೆ. ಕಸ್ಟಮ್ಸ್ ಡ್ಯೂಟಿ ವಿಚಾರದಲ್ಲಿ ರಾಜ್ಯ ಸರಕಾರ ಕಾನೂನು ರೂಪಿಸಲು ಸಾಧ್ಯವಾಗದೇ ಇದ್ದಾಗ ಕೇಂದ್ರ ಸರಕಾರ ರೂಪಿಸಬಹುದು. ಪ್ರಕರಣದ ದಾಖಲೆಗಳಲ್ಲಿ ತನ್ನ ವೃತ್ತಿ (ಸಿನಿಮಾ)ಯನ್ನು ಉಲ್ಲೇಖಿಸಲಾಗಿಲ್ಲ. ಅಭಿಮಾನಿಗಳು ವಿಜಯ್ರನ್ನು ರಿಯಲ್ ಹೀರೋ ಎಂದೇ ಭಾವಿಸಿದ್ದಾರೆ ಎಂದು ನ್ಯಾಯಪೀಠದ ಮುಂದೆ ಹೇಳಿದ್ದಾರೆ.
ತೆರಿಗೆ ವಂಚನೆಯ ಉದ್ದೇಶವಿಲ್ಲ. ನಟ ವಿಜಯ್ ಅವರಿಗೆ ದಂಡ ಪಾವತಿಸಲೂ ಯಾವುದೇ ಸಮಸ್ಯೆಯಿಲ್ಲ. ಆದರೆ, ನ್ಯಾಯಾಧೀಶ ಎಸ್.ಎಂ.ಸುಬ್ರಮಣ್ಯಂ ಅವರು ಮಾಡಿದ್ದ ನಕಾರಾತ್ಮಕ ಟೀಕೆಗಳನ್ನು ತೆಗೆದುಹಾಕಲು ವಕೀಲರು ಒತ್ತಾಯಿಸಿದ್ದಾರೆ. ವಿಚಾರಣೆಯನ್ನು ಕೋರ್ಟ್ ದಿನಾಂಕವನ್ನು ಉಲ್ಲೇಖಿಸದೇ ಮುಂದೂಡಿದೆ.