ತಿರುನೆಲ್ವೀಲಿ(ತಮಿಳುನಾಡು): ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯರ ಸರಣಿ ಆತ್ಮಹತ್ಯೆ ಪ್ರಕರಣ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ನಾಲ್ವರು ಬಾಲಕಿಯರು ಸಾವಿನ ಕದ ತಟ್ಟಿದ್ದು, ಇದರ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ. ತಿರುನೆಲ್ವೀಲಿ ಜಿಲ್ಲೆಯ ಕಳಕಾಡು ಸಮೀಪದ ರಾಜಲಿಂಗಪುರದ ಕೂಲಿ ಕಾರ್ಮಿಕನ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖಾಸಗಿ ಕಾಲೇಜ್ನಲ್ಲಿ ಬಿಎಸ್ಸಿ ವ್ಯಾಸಂಗ ಮಾಡ್ತಿದ್ದ 18 ವರ್ಷದ ವಿದ್ಯಾರ್ಥಿನಿ ಪೋಷಕರ ಆರ್ಥಿಕ ಸಂಕಷ್ಟ ನೋಡಿ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾಳೆಂದು ವರದಿಯಾಗಿದೆ. ವಿದ್ಯಾರ್ಥಿನಿ ಕಾಲೇಜ್ ಶುಲ್ಕ 12 ಸಾವಿರ ರೂಪಾಯಿ ಎರಡು ಕಂತುಗಳಲ್ಲಿ ತಂದೆ ಮುತ್ತು ಕುಮಾರ್ ಪಾವತಿ ಮಾಡಿದ್ದರು. ಆದರೆ, ವೈಯಕ್ತಿಕ ಖರ್ಚಿಗೆ ಹಣ ನೀಡಿರಲಿಲ್ಲ. ಜೊತೆಗೆ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಮಗಳನ್ನ ಓದಿಸಲು ಕುಟುಂಬಸ್ಥರು ಹೆಣಗಾಡುತ್ತಿರುವುದನ್ನ ಕಂಡ ವಿದ್ಯಾರ್ಥಿನಿ ಸಾವಿನ ಮನೆ ಸೇರಿದ್ದಾಳೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಪೋಷಕರು ಹೊರಗಡೆ ಹೋದಾಗ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ವಾಪಸ್ ಬಂದ ಪೋಷಕರು ಮಗಳನ್ನ ನೋಡಿ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿರಿ: ತಮಿಳುನಾಡಿನಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ; 2 ವಾರದಲ್ಲಿ ಇದು 4ನೇ ಘಟನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಕಾಡು ಪೊಲೀಸರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿನಿ ಮೃತದೇಹ ವಶಕ್ಕೆ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಗೋಸ್ಕರ ತಿರುನೆಲ್ವೀಲಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನೂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಸೊಸೈಡ್ ನೋಟ್ ಲಭ್ಯವಾಗಿದೆ. ಅದರಲ್ಲಿ ಹಣಕಾಸಿನ ವಿಚಾರ ಉಲ್ಲೇಖ ಮಾಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.