ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರದಲ್ಲಿ ಶುಕ್ರವಾರ ಶೀತ ಗಾಳಿಯು ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಅಬ್ಬರದಿಂದ ಬೀಸುತ್ತಿರುವ ಚಳಿ ಗಾಳಿಗೆ ಕಣಿವೆಯಾದ್ಯಂತ ಕೆರೆಗಳ ಮತ್ತು ಪೈಪ್‌ಗಳಲ್ಲಿ ನೀರು ಹೆಪ್ಪುಗಟ್ಟಿವೆ. ಈ ಚಳಿ ಗಾಳಿಯು ಚಳಿಗಾಲದಲ್ಲಿ 40 ದಿನಗಳ ಸುದೀರ್ಘ ಅವಧಿವರೆಗೆ ಬೀಸಲಿದೆ. 'ಚಿಲ್ಲೈ ಕಾಲನ್' ಎಂಬ ಚಳಿ ಗಾಳಿಯು ಶುಕ್ರವಾರವೂ ಮುಂದುವರಿದಿದೆ. ಈ ಶೀತ ಗಾಳಿ ಜನವರಿ 30ರವೆಗೆ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶ್ರೀನಗರ ನಗರದ ದಾಲ್ ಸರೋವರದಲ್ಲಿನ ನೀರು ಭಾಗಶಃ ಹೆಪ್ಪುಗಟ್ಟಿದೆ. ಇದೇ ಮಾರ್ಗದಲ್ಲಿ ದೋಣಿ ಸವಾರರು ಸಾಗುತ್ತಿದ್ದಾರೆ. ಕಣಿವೆಯಲ್ಲಿನ ಸರೋವರಗಳು ಭಾಗಶಃ ಹೆಪ್ಪುಗಟ್ಟಿವೆ. ಜನರು ಕುಡಿಯುವ ನೀರಿನ ಪೈಪ್‌ಗಳ ಸುತ್ತಲೂ ಸಣ್ಣದಾಗಿ ಬೆಂಕಿಯನ್ನು ಹೊತ್ತಿಸಿ ಅವುಗಳನ್ನು ಕರಗಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡ ಬಂದಿದೆ.
ಹವಾಮಾನ ಕಚೇರಿ ಮಾಹಿತಿ: ಹವಾಮಾನ ಕಚೇರಿ ಪ್ರಕಾರ, ''ಇಂದು ಶ್ರೀನಗರದಲ್ಲಿ ಕನಿಷ್ಠ ತಾಪಮಾನ ಮೈನಸ್ 3.3 ಡಿಗ್ರಿ ಸೆಲ್ಸಿಯಸ್ ಮತ್ತು ಗುಲ್ಮಾರ್ಗ್ ಮತ್ತು ಪಹಲ್ಗಾಮ್‌ನಲ್ಲಿ ಕ್ರಮವಾಗಿ ಮೈನಸ್ 1 ಮತ್ತು ಮೈನಸ್ 4.8 ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಲಡಾಖ್ ಪ್ರದೇಶದ ಲೇಹ್ ಪಟ್ಟಣದಲ್ಲಿ ಮೈನಸ್ 14.4, ಕಾರ್ಗಿಲ್ ಮೈನಸ್ 9.9 ಮತ್ತು ಡ್ರಾಸ್ ಮೈನಸ್ 12.3 ಕನಿಷ್ಠ ತಾಪಮಾನ ದಾಖಲಾಗಿದೆ. ಜಮ್ಮು ನಗರದಲ್ಲಿ 8.5, ಕತ್ರಾ 7.9, ಬಟೋಟೆ 6.3, ಭದೇರ್ವಾ 3.5 ಮತ್ತು ಬನಿಹಾಲ್ 3.8 ರಾತ್ರಿಯ ಕನಿಷ್ಠ ತಾಪಮಾನ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ವೈದ್ಯರ ಸಲಹೆ: ಶೀತ ಗಾಳಿ ಬೀಸುತ್ತಿರುವುದರಿಂದ ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಸೂಕ್ತ ಬಟ್ಟೆಗಳನ್ನು ಧರಿಸಬೇಕು. ದಟ್ಟವಾದ ಮಂಜಿನ ಕಣಗಳು ಶ್ವಾಸಕೋಶದಲ್ಲಿ ನೆಲೆಗೊಳ್ಳುವ ಸಂಭವ ಹೆಚ್ಚಿರುತ್ತದೆ. ಇದರಿಂದ ಉಬ್ಬಸ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸಾಧ್ಯವಾದಷ್ಟು ಮಾಸ್ಕ್ ಧರಿಸಿ ಓಡಾಡುವುದು ಒಳ್ಳೆಯದು. 3ರಿಂದ 4 ಉಡುಪುಗಳನ್ನು ಧರಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಹೊರಗಡೆ ಓಡಾಡುವ ಸಮಯದಲ್ಲಿ ಆದಷ್ಟು ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು. ಸ್ವೆಟರ್‌ಗಳು ಮತ್ತು ಕೈಗವಸುಗಳನ್ನು ಉಪಯೋಗಿಸಬೇಕು, ಮನೆಯೊಳಗೆ ಇರುವಾಗ ಕೂಡ ಆದಷ್ಟು ಸ್ವೆಟರ್‌ಗಳು ಧರಿಸಬೇಕು. ದೀರ್ಘ ಸಮಯಗಳವರೆಗೆ ಜನರು ತೀವ್ರ ಚಳಿ ಗಾಳಿಯಲ್ಲಿ ಓಡಾಡಿದಲ್ಲಿ ಮೂಗಿನಲ್ಲಿ ರಕ್ತ, ಅಸ್ತಮಾದಲ್ಲಿ ಏರುಪೇರು, ಜ್ವರದ ಲಕ್ಷಣಗಳು ಹಾಗೂ ತ್ವಚೆಯಲ್ಲಿ ತುರಿಕೆ ಕಂಡು ಬರುತ್ತದೆ. ಇದರಿಂದ ರಕ್ಷಣೆ ಪಡೆದುಕೊಳ್ಳಲು ಹೊರಗೆ ತೆರಳುವಾಗ ಉಣ್ಣೆಯ ಟೋಪಿಗಳನ್ನು ಬಳಸಬೇಕು. ಆದಷ್ಟು ಮನೆಯೊಳಗೆ ಇರಬೇಕು, ಚಪ್ಪಲಿಗಳನ್ನು ಧರಿಸಿ ಓಡಾಡಬೇಕು. ಜೊತೆಗೆ ಕಾಫಿ, ಚಹಾ, ಬಿಸಿಯಾದ ಪಾನೀಯಗಳನ್ನು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ರೈಲ್ವೆ ಹಳಿ ಸ್ಫೋಟಿಸಿದ ಮಾವೋವಾದಿಗಳು