ಮುಂಬೈ(ಮಹಾರಾಷ್ಟ್ರ): ನಗರದಲ್ಲಿ ನಿರ್ಮಿಸುತ್ತಿರುವ ಮಹತ್ವಾಕಾಂಕ್ಷೆಯ ಕರಾವಳಿ ಹೆದ್ದಾರಿಗೆ ಛತ್ರಪತಿ ಸಂಭಾಜಿ ಮಹಾರಾಜರ ಹೆಸರನ್ನು ಇಡುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದರು. ಗೇಟ್‌ವೇ ಆಫ್ ಇಂಡಿಯಾದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ 366ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಛತ್ರಪತಿ ಸಂಭಾಜಿ ಮಹಾರಾಜರ ಕೆಲಸ ಮತ್ತು ತ್ಯಾಗ ಯುವ ಪೀಳಿಗೆಗೆ ಮಾರ್ಗದರ್ಶಿ ಮತ್ತು ಸ್ಫೂರ್ತಿಯಾಗಿದೆ. ರಾಜ್ಯದಲ್ಲಿನ ಕೋಟೆಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಛತ್ರಪತಿ ಸಂಭಾಜಿ ಮಹಾರಾಜರ ಸ್ಮಾರಕ, ವಧು ಬುದ್ರುಕ್ ಮತ್ತು ತುಲಾಪುರದ ಎರಡೂ ಸ್ಮಾರಕಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಈ ಐತಿಹಾಸಿಕ ಪರಂಪರೆಯಿಂದ ಯುವ ಪೀಳಿಗೆ ಸ್ಫೂರ್ತಿ ಪಡೆಯಲಿದೆ. ಅಲ್ಲದೆ, ಮುಂಬೈನ ಕರಾವಳಿ ಹೆದ್ದಾರಿ ಪ್ರದೇಶದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕಕ್ಕೆ ಸಿದ್ಧತೆ: ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಜನ್ಮದಿನವನ್ನು ಮೊದಲ ಬಾರಿಗೆ ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಈ ಮೂಲಕ ಅವರ ಸ್ಮರಣೆಯು ಸ್ಫೂರ್ತಿದಾಯಕ ಮತ್ತು ಚೈತನ್ಯದಾಯಕವಾಗಿದೆ. ಅಲ್ಲದೆ ಶಿವಶಂಭುರಾಯರ ಕೆಲಸ ಮತ್ತು ಕೊಡುಗೆಯನ್ನು ಸ್ಮರಿಸಿದ್ದು ಸಂತಸದ ಸಂಗತಿ. ಛತ್ರಪತಿ ಸಂಭಾಜಿ ಮಹಾರಾಜ್ ಜಯಂತ್ಯುತ್ಸವನ್ನು ದೇಶಾದ್ಯಂತ ಆಚರಿಸಿಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಮುಖ್ಯಮಂತ್ರಿ ಶಿಂಧೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಪ್ರವಾಸೋದ್ಯಮ ಸಚಿವ ಮಂಗಲಪ್ರಭಾತ್ ಲೋಧಾ, ಡಾ.ತಾನಾಜಿ ಸಾವಂತ್, ಶಾಸಕ ಪ್ರಕಾಶ್ ಸುರ್ವೆ, ಶಾಸಕಿ ಯಾಮಿನಿ ಜಾಧವ್, ರಾಜಮಾತೆ ಜಿಜಾವು ವಿಜಯರಾವ್, ಜಾಧವ್ ವಂಶಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ಪಾಲಿಗೆ ಖರ್ಗೆ ಲಕ್.. ಆರು ತಿಂಗಳ ಅಂತರದಲ್ಲಿ 'ಕೈ' ತೆಕ್ಕೆಗೆ ಎರಡು ರಾಜ್ಯಗಳು