ಜಮುಯಿ (ಬಿಹಾರ): ವಿರೋಧ ಪಕ್ಷದ ಅಭ್ಯರ್ಥಿ ಸಿಎಂ ನಿತೀಶ್ ಕುಮಾರ್ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಎಂಬುದರ ಕುರಿತಂತೆ ಚರ್ಚೆಗಳು ಜೋರಾಗಿ ನಡೆಯುತ್ತಿದ್ದು, ಇದರ ನಡುವೆ ನಿತೀಶ್ ಎದ್ದಿರುವ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾದ ನಂತರ ಚರ್ಚೆ ತೀವ್ರಗೊಂಡಿದೆ. ಆದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರ ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.
ಪ್ರಸ್ತುತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಈ ವರ್ಷದ ಜುಲೈನಲ್ಲಿ ಕೊನೆಗೊಳ್ಳಲಿದೆ. ಇದರಿಂದಾಗಿ ಮುಂದಿನ ಅಧ್ಯಕ್ಷರ ಆಯ್ಕೆಯ ಊಹಾಪೋಹಗಳು ಜೋರಾಗಿವೆ. ಈ ನಡುವೆ ಬಿಹಾರ ಸಿಎಂ ನಿತೀಶ್ ಕುಮಾರ್ ವಿಪಕ್ಷಗಳಿಂದ ರಾಷ್ಟ್ರಪತಿ ಅಭ್ಯರ್ಥಿಯಾಗುವ ಚರ್ಚೆ ತೀವ್ರಗೊಂಡಿದೆ.
ಈಗಾಗಲೇ ಹಲವು ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಈ ಕೆಲಸದಲ್ಲಿ ತೊಡಗಿವೆ. ಬಿಜೆಪಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ಹೊರತು ಪಡಿಸಿ ಇತರ ಹಲವು ವಿರೋಧ ಪಕ್ಷಗಳ ತಂತ್ರವಾಗಿದ್ದು, ಕಾಂಗ್ರೆಸ್ ಕೂಡ ಇದಕ್ಕೆ ಬಲವಂತವಾಗಿ ಬೆಂಬಲ ನೀಡುತ್ತಿದೆ ಎಂಬ ವಾದ ಕೇಳಿ ಬರುತ್ತಿದೆ.
ಬಿಹಾರದ ಜಮುಯಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಇವುಗಳನ್ನು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ನಮ್ಮ ಪಕ್ಷದ ನಾಯಕರು ಸುಮ್ಮನೇ ಹಾಗೆ ಮಾತನಾಡುತ್ತಾರೆ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ನಮ್ಮ ಮನಸ್ಸಿನಲ್ಲಿ ಯಾವುದೇ ಕಲ್ಪನೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಯುಪಿ ಚುನಾವಣೆ: ನಾಲ್ಕನೇ ಹಂತದಲ್ಲಿ ಶೇ.57.83 ರಷ್ಟು ಮತದಾನ