ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಹುಟ್ಟೂರಿಗೆ ರಸ್ತೆ, ಸೇತುವೆ ಇಲ್ಲ. ಆದರೆ ಎರಡು ಹೆಲಿಪ್ಯಾಡ್ಗಳು ಇವೆ. ಶಾಲೆಗೆ ಹೋಗಲು ವಿದ್ಯಾರ್ಥಿಗಳು ನಿತ್ಯ ಇನ್ನಿಲ್ಲದ ರೀತಿಯ ತೊಂದರೆ ಅನುಭವಿಸಬೇಕಾಗಿದೆ. ಈ ಸ್ಥಿತಿಯ ಕುರಿತು ಬಾಂಬೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಏಕನಾಥ್ ಶಿಂದೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಹಳ್ಳಿಗಳಲ್ಲಿ ಹೆಲಿಪ್ಯಾಡ್ಗಳಿರುವ ಬಗ್ಗೆ ನಮಗೆ ಯಾವುದೇ ರೀತಿಯ ಆಕ್ಷೇಪ ಇಲ್ಲ. ಆದರೆ, ಉತ್ತಮ ರಸ್ತೆ ನಿರ್ಮಾಣ ಮಾಡಿ. ಇದರಿಂದ ಮಕ್ಕಳು ಶಾಲೆಗೆ ಹೋಗಬಹುದು ಎಂದು ನ್ಯಾಯಮೂರ್ತಿ ಪಿಬಿ ವರಾಲೆ ನೇತೃತ್ವದ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿರಿ: ಉದ್ಯೋಗಿಗಳಿಗೆ 'ಮಹೀಂದ್ರಾ ಕಾರು' ಗಿಫ್ಟ್ ನೀಡಿದ ಹಾಲು ಉತ್ಪನ್ನ ತಯಾರಿಸುವ ಕಂಪನಿ ಮಾಲೀಕ!
ಸರಿಯಾದ ರಸ್ತೆ ಇಲ್ಲದ ಕಾರಣ ವಿದ್ಯಾರ್ಥಿಗಳು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಮೂಲತಃ ಸತಾರಾದವರು. ಹೀಗಾಗಿ, ರಾಜ್ಯ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದೆ. ಜೊತೆಗೆ ಆಗಸ್ಟ್ 30ರೊಳಗೆ ಅಫಡವಿಟ್ ಸಲ್ಲಿಕೆಗೆ ಸೂಚನೆ ನೀಡಿದೆ. ಶಿಂದೆ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಸಂಸದ ಶ್ರೀಕಾಂತ್ ಶಿಂದೆ ಮಕ್ಕಳಿಗೋಸ್ಕರ ದೋಣಿ ವ್ಯವಸ್ಥೆ ಮಾಡಿದ್ದಾರೆ.