ಇಂದೋರ್ (ಮಧ್ಯಪ್ರದೇಶ): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ‘ದ್ರೋಹಿ’ ಎಂದು ಕರೆದಿರುವುದು ವಿವಾದ ಸೃಷ್ಟಿಸಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಬ್ಬರೂ ನಾಯಕರು ಪಕ್ಷದ ಆಸ್ತಿಯಾಗಿದ್ದಾರೆ ಹಾಗೂ ಇಬ್ಬರ ಆರೋಪ ಪ್ರತ್ಯಾರೋಪಗಳು ಭಾರತ್ ಜೋಡೋ ಯಾತ್ರೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಇಂದೋರ್ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ಏನು ಹೇಳಿದರು ಎಂಬುದರ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಈ ಇಬ್ಬರೂ ನಾಯಕರು ಕಾಂಗ್ರೆಸ್‌ಗೆ ಆಸ್ತಿಯಾಗಿದ್ದಾರೆ. ಆದರೆ ಈ ವಿವಾದ ಭಾರತ್ ಜೋಡೋ ಯಾತ್ರೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಾನು ಖಾತರಿಪಡಿಸುತ್ತೇನೆ ಎಂದು ಹೇಳಿದರು.
ಅಮೇಠಿಯಿಂದ ಮತ್ತೆ ಸ್ಪರ್ಧಿಸುವ ಬಗ್ಗೆ ಒಂದೂವರೆ ವರ್ಷದ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯ ನನ್ನ ಗಮನ ಭಾರತ್ ಜೋಡೋ ಯಾತ್ರೆಯ ಮೇಲಿದೆ ಎಂದು ರಾಹುಲ್ ತಿಳಿಸಿದರು.
ಅವಕಾಶ ಸಿಕ್ಕರೆ ಅಮೇಥಿಯಿಂದ ಮತ್ತೆ ಸ್ಪರ್ಧಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ, ಸದ್ಯ ನನ್ನ ಗಮನ ಭಾರತ್ ಜೋಡೋ ಯಾತ್ರೆಯ ಮೇಲಿರುವುದರಿಂದ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಲು ನಾನು ಬಯಸುವುದಿಲ್ಲ. ಇವೆಲ್ಲವೂ ಮುಖ್ಯ ಆಲೋಚನೆಯಿಂದ ಗಮನವನ್ನು ಸೆಳೆಯುವ ಪ್ರಯತ್ನಗಳಾಗಿವೆ. ನಾನು ಅಮೇಥಿಯಿಂದ ಸ್ಪರ್ಧಿಸುತ್ತೇನೆಯೇ ಅಥವಾ ಇಲ್ಲವೇ ಎಂಬ ವಿಚಾರ ನಾಳಿನ ಪತ್ರಿಕೆಗಳ ಹೆಡ್ಲೈನ್ ಆಗಬೇಕೆಂಬುದು ನಿಮ್ಮ ಬಯಕೆಯಾಗಿದೆ. ಆದರೆ ಭಾರತ್ ಜೋಡೋ ಯಾತ್ರೆ, ಯಾತ್ರೆಯ ಹಿಂದಿನ ವಿಚಾರಗಳು ಮತ್ತು ಸಿದ್ಧಾಂತಗಳ ಬಗ್ಗೆ ಪತ್ರಿಕೆಗಳು ಬರೆಯಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
ಗುರುವಾರ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಗೆಹ್ಲೋಟ್, 2020 ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ರಾಜ್ಯ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದ ಸಚಿನ್ ಪೈಲಟ್ ಗದ್ದಾರ್ (ದ್ರೋಹಿ) ಆಗಿದ್ದು, ನನ್ನ ಸ್ಥಾನಕ್ಕೆ ಅವರು ಬರಲು ಸಾಧ್ಯವಿಲ್ಲ ಎಂದಿದ್ದರು.
ಇದನ್ನೂ ಓದಿ: ಅತ್ಯುತ್ಸಾಹದಲ್ಲಿ ಅರ್ಜಿ ಕರೆದಿದ್ದೆ ಕಾಂಗ್ರೆಸ್‌ಗೆ ಇಕ್ಕಟ್ಟಾಯ್ತಾ.. ಮುಂದಿನ ಪರಿಸ್ಥಿತಿಗೆ ಪರಿಹಾರ ಏನು?