ಧರ್ಮಶಾಲಾ : ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಭಾನುವಾರ ತಡರಾತ್ರಿಯಿಂದ ಕಾಂಗ್ರಾ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ, ಪ್ರವಾಸಿ ಪಟ್ಟಣವಾದ ಧರ್ಮಶಾಲಾದ ಭಗ್ಸುನಾಗ್‌ನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದಾಗಿ ಪಟ್ಟಣ ನದಿಯಾಗಿ ಮಾರ್ಪಟ್ಟಿದೆ.
ಮಳೆನೀರಿನ ರಭಸಕ್ಕೆ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಭಾರಿ ಮಳೆಯಿಂದಾಗಿ ಚರಂಡಿ ಪಕ್ಕದಲ್ಲಿ ನಿರ್ಮಿಸಲಾದ ಮನೆಗಳು ಮತ್ತು ಹೋಟೆಲ್‌ಗಳು, ಮಾರುಕಟ್ಟೆಗಳಿಗೆ ಸಾಕಷ್ಟು ಹಾನಿಯಾಗಿದೆ.
ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ. ಡಿಸಿ ನಿಪುಣ್ ಜಿಂದಾಲ್ ಸಹ ಸ್ಥಳಕ್ಕೆ ಆಗಮಿಸಿದ್ದು, ನದಿ ಚರಂಡಿಗಳಿರುವ ಪ್ರದೇಶದಿಂದ ದೂರ ತೆರಳಲು ಪ್ರವಾಸಿಗರು ಮತ್ತು ಸ್ಥಳೀಯ ಜನರಿಗೆ ಮನವಿ ಮಾಡಿದ್ದಾರೆ.
ಮಳೆ ನೀರು ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದ್ರೆ, ಇತ್ತ ವ್ಯಾಪಕ ಮಳೆ ಬಂದಿದ್ದಕ್ಕೆ ಮೆಕ್ಕೆಜೋಳ ಬೆಳೆದ ರೈತರು ಸಂತಸಗೊಂಡಿದ್ದಾರೆ.