ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಜೀವ ಬೆದರಿಕೆ ಪತ್ರ ಪ್ರಕರಣ ಸಂಬಂಧ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಆಪ್ತನೋರ್ವನನ್ನು ಪೊಲೀಸರು ಗುರುತಿಸಿದ್ದಾರೆ. ವಿಕ್ರಂ ಬ್ರರ್ ಎಂಬಾತ ಈ ಬೆದರಿಕೆ ಪತ್ರ ಬರೆದಿದ್ದಾನೆ ಎಂದು ಪೊಲೀಸರು ಪತ್ತೆ ಹೆಚ್ಚಿದ್ದಾರೆ.
ಸದ್ಯ ವಿಕ್ರಂ ಬ್ರರ್ ವಿದೇಶದಲ್ಲಿ ನೆಲೆಸಿದ್ದಾನೆ. ಈತನ ರಾಜಸ್ಥಾನದ ಹನುಮಾನ್ಘಡ ನಿವಾಸಿಯಾಗಿದ್ದು, ಓರ್ವ ಗ್ಯಾಂಗ್ಸ್ಟರ್ ಆಗಿದ್ದಾನೆ. ಅಲ್ಲದೇ, ವಿವಿಧ ರಾಜ್ಯಗಳಲ್ಲಿ ಈತನ ವಿರುದ್ಧ ಎರಡು ಡಜನ್ಗೂ ಅಧಿಕ ಕ್ರಿಮಿನಲ್ ಕೇಸ್ಗಳು ದಾಖಲಾಗಿವೆ.
ಲಾರೆನ್ಸ್ ಬಿಷ್ಣೋಯಿ ಕೈವಾಡ ಶಂಕೆ: ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪತ್ರ ಬಂದಿರುವುದರ ಹಿಂದೆ ಲಾರೆನ್ಸ್ ಬಿಷ್ಣೋಯಿ ಕೈವಾಡ ಇರುವ ಶಂಕೆಯನ್ನೂ ಮುಂಬೈ ಪೊಲೀಸರು ವ್ಯಕ್ತಪಡಿಸಿದ್ದಾರೆ. 1998ರಲ್ಲಿ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಿಲುಕಿದ್ದ ಸಲ್ಮಾನ್ಗೆ ಇದೇ ಲಾರೆನ್ಸ್ ಬಿಷ್ಣೋಯಿ ಕೊಲೆ ಮಾಡುವುದಾಗಿ ಶಪಥ ಮಾಡಿದ್ದ.
ಚಿತ್ತೀಚೆಗೆ ಕೊಲೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರಂತೆ ನಟ ಸಲ್ಮಾನ್ ಮತ್ತು ಅವರ ತಂದೆ ಇಬ್ಬರನ್ನೂ ಹತ್ಯೆ ಮಾಡಲಾಗುವುದು ಎಂದು ಕಳೆದ ಭಾನುವಾರ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಮೂಸೆ ವಾಲಾ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಬಿಷ್ಣೋಯಿ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈಗಾಗಲೇ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಮೇಲೆ ಮತ್ತಷ್ಟು ಅನುಮಾನಗಳು ಹೆಚ್ಚಾಗಿವೆ.
ಅಲ್ಲದೇ, ಮಂಗಳವಾರಷ್ಟೇ ನಟ ಸಲ್ಮಾನ್ಗೆ ಜೀವ ಬೆದರಿಕೆ ಪತ್ರ ಕುರಿತಾಗಿ ದೆಹಲಿ ಪೊಲೀಸರು ಲಾರೆನ್ಸ್ ಬಿಷ್ಣೋಯಿಯನ್ನು ವಿಚಾರಣೆಗೊಳಪಡಿಸಿದ್ದರು. ಇದೀಗ ಈ ಪತ್ರ ಬರೆದಿರುವ ವಿಕ್ರಂ ಬ್ರರ್ ಕೂಡ ಬಿಷ್ಣೋಯಿ ಆಪ್ತನೆಂದು ಗೊತ್ತಾದ ಹಿನ್ನೆಲೆಯಲ್ಲಿ ಈ ವಿಷಯವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಮೇಲಾಗಿ ಬೆದರಿಕೆ ಪತ್ರದ ಕೊನೆಯಲ್ಲಿ 'ಎಲ್ಬಿ' ಎಂದು ಉಲ್ಲೇಖಿಸಲಾಗಿದೆ. ಇದು 'ಲಾರೆನ್ಸ್ ಬಿಷ್ಣೋಯಿ'ಯನ್ನೂ ಸೂಚಿಸುತ್ತದೆ ಎಂದು ಸಂಶಯ ಹೊಂದಿದ್ದಾರೆ. ಆದ್ದರಿಂದ ಸಲ್ಮಾನ್ ಮನೆಗೆ ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಅಲ್ಲದೇ, ಎಲ್ಲ ಬೆಳವಣಿಗೆಗಳ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರನ್ನು ಮುಂಬೈನ ಜಂಟಿ ಪೊಲೀಸ್ ಆಯುಕ್ತ ವಿಶ್ವಾಸ್ ನಾನಗ್ರೆ ಪಾಟೀಲ್ ಭೇಟಿ ವಿವರಿಸಿದ್ದಾರೆ.
ಇದನ್ನೂ ಓದಿ: ಗಾಯಕ ಮೂಸೆವಾಲಾ ಹತ್ಯೆ ಪ್ರಕರಣ: ದೇಶಬಿಟ್ಟ ಪ್ರಮುಖ ಸಂಚುಕೋರ, ಮತ್ತೊಬ್ಬ ಕಾಣೆ