ಶಹಜಹಾನಪುರ(ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ವೈರಸ್ ನಿತ್ಯ ಅನೇಕ ಜನರ ಪ್ರಾಣ ಬಲಿ ಪಡೆದುಕೊಂಡಿದೆ. ಇದರಿಂದ ಸಾವಿರಾರು ಕುಟುಂಬ ತಮ್ಮ ಜೀವನಕ್ಕೆ ಆಧಾರವಾಗಿದ್ದವರನ್ನ ಕಳೆದುಕೊಂಡು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ. ಉತ್ತರ ಪ್ರದೇಶದ ಶಹಜಹಾನಪುರದಲ್ಲೂ ಇಂತಹದೊಂದು ಘಟನೆ ನಡೆದಿದೆ. 10 ವರ್ಷದ ಬಾಲಕಿಯೊಬ್ಬಳು ತಂದೆಯನ್ನ ಕಳೆದುಕೊಂಡಿದ್ದು, ಇದೀಗ ಕುಟುಂಬ ಸಾಕುವ ಜವಾಬ್ದಾರಿ ಹೊತ್ತುಕೊಂಡು ಫುಟ್ಪಾತ್ನಲ್ಲಿ ಬಟ್ಟೆ ಮಾರುತ್ತಿದ್ದಾಳೆ.
ಶಹಜಹಾನಪುರ ಕಿರ್ಣಿಬಾಗ್ನ ಫುಟ್ಪಾತ್ನಲ್ಲಿ ಬಾಲಕಿ ಬಟ್ಟೆ ಮಾರಾಟ ಮಾಡ್ತಿದ್ದಾಳೆ. 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಾಹಿ ತಂದೆ ಕಳೆದ ಕೆಲ ದಿನಗಳ ಹಿಂದೆ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಮನೆಯಲ್ಲಿ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳಲು ಯಾರೂ ಇಲ್ಲ. ಇದೇ ಕಾರಣಕ್ಕಾಗಿ 10 ವರ್ಷದ ಬಾಲಕಿ ಖುದ್ದಾಗಿ ಇದೀಗ ಬಟ್ಟೆ ಮಾರಾಟ ಮಾಡಲು ಮುಂದಾಗಿದ್ದಾಳೆ. ಮಾಹಿ ತಂದೆ ಪ್ರದೀಪ್ ಕುಮಾರ್(45), ಅಂಗಡಿಗಳಿಗೆ ಸಿದ್ಧ ಬಟ್ಟೆ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ದಿಢೀರ್ ಆಗಿ ಸಾವನ್ನಪ್ಪಿರುವುದು ಕುಟುಂಬಕ್ಕೆ ಇನ್ನಿಲ್ಲದ ಆಘಾತವಾಗಿದೆ. ಕುಟುಂಬದಲ್ಲಿರುವ ಅಜ್ಜ ಹಾಗೂ ಅಜ್ಜಿಯ ಸಾಕುವ ಜವಾಬ್ದಾರಿ ಇದೀಗ ಬಾಲಕಿ ಮೇಲೆ ಬಿದ್ದಿದೆ.
ಇದನ್ನೂ ಓದಿರಿ: ಮದುವೆ ವೇಳೆ ದೆವ್ವದ ಕಾಟವಂತೆ.. ತಾಳಿ ಕಟ್ಟದೇ ಪರಾರಿಯಾದ ವರ!
ಇದೇ ವಿಷಯವಾಗಿ ಮಾತನಾಡಿರುವ ಬಾಲಕಿ ನನ್ನ ಅಜ್ಜನಿಗೆ ಇದೀಗ 70 ವರ್ಷ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೇರೆ ಯಾವುದೇ ಕಡೆಯಿಂದ ನಮಗೆ ಸಹಾಯ ಬಾರದ ಕಾರಣ ನಾನು ಈ ಕೆಲಸ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದು ತಿಳಿಸಿದ್ದಾಳೆ. ಉತ್ತರ ಪ್ರದೇಶದ ವಾರಾಣಸಿಯಲ್ಲೂ ಕೊರೊನಾ ಸೋಂಕಿನಿಂದಾಗಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಹೀಗಾಗಿ ಕುಟುಂಬ ನಿರ್ವಹಣೆ ಇನ್ನಿಲ್ಲದ ಸಮಸ್ಯೆಯಾಗಿ ಪರಿಣಮಿಸಿದೆ.