ಜಾಮ್‌ನಗರ (ಗುಜರಾತ್) : ಸಲಿಂಗ ಸಂಬಂಧ ನಿರಾಕರಿಸಿದ 16 ವರ್ಷದ ಬಾಲಕನನ್ನು ಆತನ ಇಬ್ಬರು ಸ್ನೇಹಿತರು ಕತ್ತು ಹಿಸುಕಿ ಕೊಲೆ ಮಾಡಿದ್ದಲ್ಲದೇ, ಶವಕ್ಕೆ ಬೆಂಕಿ ಹಚ್ಚಿ ಸುಟ್ಟ ಘಟನೆ ಗುಜರಾತ್ನ ಜಾಮ್ನಗರದಲ್ಲಿ ಶನಿವಾರ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ: ಜಾಮ್ನಗರದ ಮೋಹನ ನಗರದ ನಿವಾಸಿಯಾಗಿದ್ದ 11 ನೇ ತರಗತಿ ಓದುತ್ತಿದ್ದ ಬಾಲಕ, ಕಾಲೇಜು ಮುಗಿದರೂ ಮನೆಗೆ ವಾಪಸ್ ಆಗಿರಲಿಲ್ಲ. ಆತಂಕಗೊಂಡ ಪೋಷಕರು ಹುಡುಕಾಡಿದ್ದರು. ಆದರೆ, ಎಲ್ಲಿಯೂ ಪತ್ತೆಯಾಗದ ಕಾರಣ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಮೋಹನನಗರ ವಸತಿ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ,ಬಾಲಕನನ್ನು ಇಬ್ಬರು ಯುವಕರು ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿತ್ತು. ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.
ಇದೇ ವೇಳೆ ಇಂದು(ಶನಿವಾರ) ಬೆಳಗ್ಗೆ ಸುವಾರ್ದಾ ಗ್ರಾಮದ ಹೊರಭಾಗದಲ್ಲಿ ಬಾಲಕನ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು. ಮಾಹಿತಿ ಪಡೆದ ಪೊಲೀಸರು ಮತ್ತು ಫೋರೆನ್ಸಿಕ್ ತಂಡಗಳು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಾಮ್‌ನಗರ ಜಿಜಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಆರೋಪಿಗಳು ಬಾಯ್ಬಿಟ್ಟ ಅಸಲಿ ಸತ್ಯ: ಬಂಧಿತ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಸಲಿಂಗ ಸಂಬಂಧದ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕಾಗಿ ಆತನನ್ನು ನಾವೇ ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾರೆ. ಬಾಲಕನನ್ನು ಅಪಹರಿಸಿ ಸುವರ್ದಾ ಗ್ರಾಮದ ಗಡಿಗೆ ಕರೆದುಕೊಂಡು ಹೋಗಿ ಆತನನ್ನು ಕತ್ತು ಹಿಸುಕಿ ಕೊಂದೆವು. ಶವ ಸಿಗಬಾರದು ಎಂದು ದೇಹಕ್ಕೆ ಬೆಂಕಿ ಹಚ್ಚಿದೆವು. ಅಲ್ಲಿಂದ ಪರಾರಿಯಾಗಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕನ ಹತ್ಯೆಗೂ ಮೊದಲು ಆತನ ಮೇಲೆ ಯಾವುದಾದರೂ ಅಸಹಜ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಶವಪರೀಕ್ಷೆ ವರದಿ ಬಂದ ನಂತರ ಸಂಪೂರ್ಣ ವಿಷಯ ತಿಳಿಯಲಿದೆ. ಕತ್ತು ಹಿಸುಕಿದ ಗುರುತು ಹೊರತುಪಡಿಸಿದರೆ, ಅವರ ದೇಹದ ಮೇಲೆ ಯಾವುದೇ ದಾಳಿ ನಡೆದಿರುವ ಯಾವುದೇ ಗುರುತುಗಳಿಲ್ಲ. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಅಪ್ರಾಪ್ತ ಮಗನ ಕಳೆದುಕೊಂಡ ಕುಟುಂಬಸ್ಥರು ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇಬ್ಬರಿಗೆ ಮರಣದಂಡನೆ ವಿಧಿಸಬೇಕು. ಆಗ ತನ್ನ ಮಗನಿಗೆ ನ್ಯಾಯ ಸಿಗುತ್ತದೆ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ತ್ರಿವಳಿ ಹತ್ಯೆ ಕೇಸ್: ಉತ್ತರಪ್ರದೇಶದಲ್ಲಿ ಅಡಗಿದ್ದ ಹಂತಕನನ್ನು ಬಂಧಿಸಿದ ಪೊಲೀಸರು