ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಾನಗರ ಪಾಲಿಕೆಯಲ್ಲಿಂದು ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಸದಸ್ಯರ ನಡುವೆ ಭಾರಿ ಕಿತ್ತಾಟ ನಡೆಯಿತು. ಸ್ಥಾಯಿ ಸಮಿತಿಯ ಸದಸ್ಯರ ಚುನಾವಣೆಯಲ್ಲಿ ಅಕ್ಷರಶಃ ರಣಾಂಗಣವೇ ಸೃಷ್ಟಿಯಾಯಿತು. ಪರಸ್ಪರ ನೂಕಾಟ, ತಳ್ಳಾಟ ಮಾಡಿದ್ದಷ್ಟೇ ಅಲ್ಲದೇ, ಸದಸ್ಯರೊಬ್ಬರನ್ನು ಕೆಳಗಡೆ ಹಾಕಿ ತುಳಿಯುತ್ತಿದ್ದ ದೃಶ್ಯವೂ ದೊರೆತಿದೆ. ಕೆನ್ನೆಗೆ ಏಟು, ಬಟ್ಟೆ ಮತ್ತು ಕೂದಲು ಹಿಡಿದು ಎಳೆದಾಟ, ಪಾಲಿಕೆಯ ಸಲಕರಣೆಗಳನ್ನೂ ಸದಸ್ಯರು ಪುಡಿಗಟ್ಟಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ 250 ಸದಸ್ಯ ಬಲದ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಪ್ 134 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು. ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ನಂತರ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಭಾರಿ ಕರಸತ್ತು ನಡೆಸಲಾಗಿತ್ತು. ಜನವರಿಯಿಂದ ಮೂರು ಮೇಯರ್ ಚುನಾವಣೆಯು ಗದ್ದಲ, ಗಲಾಟೆ ಕಾರಣದಿಂದಲೇ ಮುಂದೂಡಿಕೆ ಆಗುತ್ತಲೇ ಬರುತ್ತಿತ್ತು.
ಕೊನೆಗೆ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಫೆ.22ರಂದು ಮೇಯರ್ ಚುನಾವಣೆ ನಡೆದಿದೆ. ಅದೇ ದಿನ ಸ್ಥಾಯಿ ಸಮಿತಿ ಚುನಾವಣೆಯೂ ನಡೆಯಬೇಕಿತ್ತು. 47 ಕೌನ್ಸಿಲರ್‌ಗಳು ಮತ ಚಲಾಯಿಸಿದ್ದರು. ಆದರೆ, ಇದರ ಮಧ್ಯೆ ಬಿಜೆಪಿ ಮತ್ತು ಆಪ್ ಸದಸ್ಯರ ನಡುವೆ ಪೆನ್ನು ಮತ್ತು ಮೊಬೈಲ್ ಕೊಂಡೊಯ್ಯುವ ವಿಚಾರದಲ್ಲಿ ಗಲಾಟೆ ಸೃಷ್ಟಿಯಾಗಿತ್ತು. ಇದಾದ ನಂತರ ಚುನಾವಣೆ ಪ್ರಕ್ರಿಯೆ ನಿಂತು ಹೋಯಿತು. ಅಲ್ಲಿಂದ ಸ್ಥಾಯಿ ಸಮಿತಿ ಚುನಾವಣೆ ನಡೆಸುವ ಕಸರತ್ತು ಮುಂದುವರೆದಿದೆ. ಇದೇ ವೇಳೆ ಸದನವನ್ನು 13 ಬಾರಿ ಮುಂದೂಡಲಾಗಿದೆ. ನಂತರ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಗುರುವಾರದ ಕಲಾಪವನ್ನು ಶುಕ್ರವಾರ ಬೆಳಗಿನ ಜಾವಕ್ಕೆ ಮುಂದೂಡಿಕೆ ಮಾಡಲಾಗಿತ್ತು.
ಒಂದು ಮತ ಅಸಿಂಧು: ಅಂತೆಯೇ, ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಸ್ಥಾಯಿ ಸಮಿತಿಯ 6 ಸದಸ್ಯರಿಗೆ ಮತದಾನ ನಡೆಯಿತು. 250 ಸದಸ್ಯ ಬಲದ ಎಂಸಿಡಿಯಲ್ಲಿ 8 ಕಾಂಗ್ರೆಸ್ ಕೌನ್ಸಿಲರ್‌ಗಳು ಗೈರು ಹಾಜರಾಗಿದ್ದರಿಂದ ಕೇವಲ 242 ಸದಸ್ಯರು ಮಾತ್ರ ಮತ ಚಲಾಯಿಸಿದರು. ಮತ ಎಣಿಕೆ ವೇಳೆ ಒಂದು ಮತ ಅಸಿಂಧುವಾದಾಗ ಬಿಜೆಪಿ ಕೌನ್ಸಿಲರ್‌ಗಳು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅಲ್ಲಿಂದ ಇಡೀ ರಣಾಂಗಣವಾಗಿ ಮಾರ್ಪಟ್ಟಿತು.
ಮಹಿಳಾ ಕೌನ್ಸಿಲರ್‌ಗಳು ಪರಸ್ಪರ ಕೂದಲು ಎಳೆಯುತ್ತಿದ್ದರೆ, ಪುರುಷ ಕೌನ್ಸಿಲರ್‌ಗಳು ಪರಸ್ಪರ ಶೂಗಳನ್ನು ಎಸೆದಿದ್ದು ಕಂಡುಬಂತು. ಇದರ ನಡುವೆ ಸಂಜೆ 7 ಗಂಟೆ ಸುಮಾರಿಗೆ ಬಿಜೆಪಿ ಕೌನ್ಸಿಲರ್‌ಗಳು ಮರು ಮತ ಎಣಿಕೆಗೆ ಒತ್ತಾಯಿಸಿದರು. ಆಗ ಇದ್ದಕ್ಕಿದ್ದಂತೆ ಕೆಲವು ಕೌನ್ಸಿಲರ್‌ಗಳು ಮೇಯರ್ ಪೀಠದ ಕಡೆಗೆ ತೆರಳಿದರು. ಈ ವೇಳೆ ಭದ್ರತಾ ಸಿಬ್ಬಂದಿ ತಡೆಯಲು ಮುಂದಾದರು. ಆಗ ಸಿಟ್ಟಿಗೆದ್ದ ಸದಸ್ಯರು ಭದ್ರತಾ ಸಿಬ್ಬಂದಿಯನ್ನೇ ಹಿಂದಕ್ಕೆ ತಳ್ಳಿ ಮೇಯರ್ ಕುರ್ಚಿ ಬಳಿಗೆ ತಲುಪಿದರು. ಆಗ ಮೇಯರ್ ತಮ್ಮ ಆಸನದಿಂದ ಎದ್ದರು. ಇದೇ ವೇಳೆ ಕುರ್ಚಿಯನ್ನು ಎತ್ತಿಕೊಂಡು ಹಿಂದಿನಿಂದ ಸದಸ್ಯರು ಎಸೆದರು.
ಗಲಾಟೆಯಲ್ಲಿ ಕೌನ್ಸಿಲರ್ ಒಬ್ಬರು ಪ್ರಜ್ಞೆ ತಪ್ಪಿ ಕೆಳಬಿದ್ದರು. ಅವರನ್ನು ಮೇಜಿನ ಮೇಲೆ ಮಲಗಿಸಿ ನೀರು ಕೊಟ್ಟು ಉಪಚರಿಸಲಾಯಿತು. ಮತ್ತೊಬ್ಬ ಸದಸ್ಯರನ್ನು ಬೆನ್ನಟ್ಟಿ ಕೆಳಗಡೆ ತಳ್ಳಿ ಕಾಲಿನಿಂದ ಒದ್ದಿದ್ದು ಕೂಡ ನಡೆಯಿತು. ಮಹಿಳಾ ಸದಸ್ಯರೊಬ್ಬರ ಕೈಗೆ ಗಾಯ ಆಗಿದೆ. ಈ ಜಟಾಪಟಿಯ ನಂತರ ಮೇಯರ್ ಹಾಗೂ ಪಾಲಿಕೆಯ ಎಲ್ಲ ಅಧಿಕಾರಿಗಳು ಹಾಗೂ ನೌಕರರು ಸಭೆಯಿಂದ ಹೊರ ನಡೆದರು.
ಸೋಮವಾರಕ್ಕೆ ಮುಂದೂಡಿಕೆ: ಇದೇ ವೇಳೆ ಬಿಜೆಪಿ ಕಾರ್ಪೊರೇಟರ್ ಕಮಲ್ಜೀತ್ ಸೆಹ್ರಾವತ್ ಮಾತನಾಡಿ, "ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯ ಮತ ಎಣಿಕೆಯನ್ನು ಮತ್ತೊಮ್ಮೆ ಮಾಡಬೇಕು. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ" ಎಂದು ಹೇಳಿದ್ದಾರೆ. ಮತ್ತೊಂದೆಡೆ, ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆ ಪ್ರಕ್ರಿಯೆಯು ಫೆ.27ರಂದು ನಡೆಯಲಿದೆ. ಮೇಯರ್ ಶೆಲ್ಲಿ ಒಬೆರಾಯ್ ಘೋಷಿಸಿದ್ದಾರೆ. ಸದನವನ್ನೂ ಅದೇ ದಿನಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ಸ್ಥಾಯಿ ಸಮಿತಿ ಚುನಾವಣೆ: ದೆಹಲಿ ಎಂಸಿಡಿ ಹೌಸ್‌ನಲ್ಲಿ ಬಿಜೆಪಿ ಕೌನ್ಸಿಲರ್‌ಗಳಿಂದ ಘೋಷಣೆ