ಮುಂಬೈ(ಮಹಾರಾಷ್ಟ್ರ): ಕೇಂದ್ರ ಸಚಿವ ನಾರಾಯಣ ರಾಣೆ ಅವರ ಹೇಳಿಕೆಯಿಂದ ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನಾ ನಡುವೆ ಕೋಲಾಹಲ ಉಂಟಾಗಿದೆ. ಶಿವಸೇನಾ ಕಾರ್ಯಕರ್ತರು ನಾಸಿಕ್ನ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ.
ಮೊದಲಿಗೆ ಕೇಂದ್ರ ಸಚಿವ ನಾರಾಯಣ ರಾಣೆ ವಿರುದ್ಧ ಘೋಷಣೆಗಳನ್ನು ಕೂಗಿದ ಶಿವಸೇನಾ ಕಾರ್ಯಕರ್ತರು, ನಾಸಿಕ್ನ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ, ಬಿಜೆಪಿ ಕಚೇರಿಗೆ ಸ್ವಲ್ಪ ಮಟ್ಟದ ಹಾನಿಯಾಗಿದೆ.
ಈ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಿಜೆಪಿ ಕಚೇರಿಗೆ ಭದ್ರತೆ ಒದಗಿಸಿದ್ದು, ಸ್ಥಳದಿಂದ ಜನರನ್ನು ಚದುರಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯದ ಹಲವೆಡೆ ಶಿವಸೇನೆಯಿಂದ ಪ್ರತಿಭಟನೆ ಆರಂಭವಾಗಿದೆ.
ಮುಂಬೈ, ರತ್ನಗಿರಿಯಲ್ಲಿ ಪ್ರತಿಭಟನೆ
ಶಿವಸೇನೆಯ ಕಾರ್ಯಕರ್ತರು ಮುಂಬೈನಲ್ಲಿರುವ ನಾರಾಯಣ ರಾಣೆ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಿಜೆಪಿ ಕಾರ್ಯಕರ್ತರು ಹಾಗೂ ಶಿವಸೇನಾ ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಎರಡೂ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಿದ್ದಾರೆ.
ರತ್ನಗಿರಿಯಲ್ಲೂ ಶಿವಸೇನಾ ಕಾರ್ಯಕರ್ತರು ಕೇಂದ್ರ ಸಚಿವ ವಿರುದ್ಧ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಹಾಗೂ ನಾರಾಯಣ ರಾಣೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಮೋದಿಗೆ ಪತ್ರ..
ರಾಣೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನಾ ಸಂಸದ ವಿನಾಯಕ್ ರಾವತ್, ಪ್ರಧಾನಿ ಮೋದಿಗೆ ಪತ್ರ ಬರೆದು ಕೇಂದ್ರ ಕ್ಯಾಬಿನೆಟ್ನಿಂದ ರಾಣೆಯನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
![clash between shivasena and bjp in maharashtra](https://etvbharatimages.akamaized.net/etvbharat/prod-images/12859662_thumbnfff.jpg)
'ನಾನು ಮಾಡಿದ್ದು ಅಪರಾಧವಲ್ಲ'
ತಮ್ಮ ವಿರುದ್ಧ ಎಫ್ಐಆರ್ ದಾಖಲು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ನಾರಾಯಣ ರಾಣೆ, 'ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಜನಪ್ರತಿನಿಧಿ. ನಾನು ಯಾವುದೇ ಅಪರಾಧ ಮಾಡಿಲ್ಲ' ಎಂದಿದ್ದಾರೆ. ಆಗಸ್ಟ್ 15ರ ಬಗ್ಗೆ ತಿಳಿದುಕೊಳ್ಳದೇ ಇರುವುದು ಅಪರಾಧವಲ್ಲವೇ ಎಂದು ನಾರಾಯಣ ರಾಣೆ ಪ್ರಶ್ನಿಸಿದ್ದಾರೆ.