ಗುವಾಹಟಿ : ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಇಂಟರ್‌ನ್ಯಾಶನಲ್ (ಎಲ್‌ಜಿಬಿಐ) ವಿಮಾನ ನಿಲ್ದಾಣದಲ್ಲಿ 80 ವರ್ಷದ ಅಂಗವಿಕಲ ನಾಗಾ ಮಹಿಳೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಸಾಮಾನ್ಯ ಭದ್ರತಾ ತಪಾಸಣೆಯ ವೇಳೆ ವಿವಸ್ತ್ರಗೊಳಿಸಿರುವ ಆಘಾತಕಾರಿ ಘಟನೆಯೊಂದು ಗುರುವಾರ ನಡೆದಿದೆ.
ಮಹಿಳೆಯ ಮಗಳು, ಪ್ರಸಿದ್ಧ ಮಾನವಶಾಸ್ತ್ರಜ್ಞ ಮತ್ತು ಲೇಖಕಿ ಡಾಲಿ ಕಿಕೋನ್ ತಮ್ಮ ತಾಯಿಗಾದ ಅನ್ಯಾಯವನ್ನು ಟ್ವಿಟರ್ನಲ್ಲಿ ಹಂಚಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ಗುವಹಾಟಿ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಭದ್ರತಾ ತಪಾಸಣೆಯಲ್ಲಿ 80 ವರ್ಷದ ನನ್ನ ಅಂಗವಿಕಲ ತಾಯಿಯನ್ನು ವಿವಸ್ತ್ರಗೊಳಿಸಲಾಯಿತು.
ನನ್ನ ತಾಯಿಗೆ ಅಳವಡಿಸಿರುವ ಟೈಟಾನಿಯಂ ಹಿಪ್ ಇಂಪ್ಲಾಂಟ್ ಅನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಸಿಬ್ಬಂದಿ ಆಕೆಗೆ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ. ಇದು ನಾವು ಹಿರಿಯರನ್ನು ನಡೆಸಿಕೊಳ್ಳುವ ರೀತಿಯಾ? ಎಂದು ಕಿಕಾನ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ದಯವಿಟ್ಟು, ಯಾರಾದರೂ ಸಹಾಯ ಮಾಡಿ.
ಗುವಾಹಟಿ ಏರ್‌ಪೋರ್ಟ್‌ನಲ್ಲಿರುವ ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ತಂಡವು ನನ್ನ ತಾಯಿಯನ್ನು ನೋಡಿಕೊಳ್ಳುತ್ತಿರುವ ನನ್ನ ಸೊಸೆಗೆ ಕಿರುಕುಳ ನೀಡುತ್ತಿದ್ದಾರೆ. ಅವಳು ಬರೆದಿರುವ ದೂರಿನ ಅರ್ಜಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಅವರು ಅದರ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲೂ ಅನುಮತಿ ನೀಡಿಲಿಲ್ಲ. ಅದಕ್ಕೆ 'ಅನುಮತಿ' ಇಲ್ಲ ಎಂದಿದ್ದಾರೆ. ನನ್ನ ತಾಯಿ ಸಂಕಷ್ಟದಲ್ಲಿದ್ದಾರೆ. ಎಂದು ಬರೆದುಕೊಂಡಿದ್ದಾರೆ.
ಇದು ಅಸಹ್ಯಕರವಾಗಿದೆ! ನನ್ನ 80 ವರ್ಷದ ಅಂಗವಿಕಲ ತಾಯಿ ತನ್ನ ಒಳಉಡುಪನ್ನು ತೆಗೆದು ವಿವಸ್ತ್ರವಾಗುವಂತೆ ಒತ್ತಾಯಿಸಲಾಗಿದೆ. ಯಾಕೆ? ಎಂಬ ಆಕೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಈ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.