ಮಹದಾಬಾದ್: ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕ ಚಿರಾಗ್ ಪಾಸ್ವಾನ್ ಬಿಹಾರದಲ್ಲಿ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ರಾತ್ರಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಿಜೆಪಿಯ ಹಿರಿಯ ನಾಯಕರೊಬ್ಬರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಹಮದಾಬಾದ್ ವಿಮಾನ ನಿಲ್ದಾಣ ಹೊರಗಡೆ ಪ್ರತಿಕ್ರಿಯಿಸಿದ ಚಿರಾಗ್, ವೈಯಕ್ತಿಕ ಕಾರಣಕ್ಕಾಗಿ ಅಹಮದಾಬಾದ್‌ಗೆ ಭೇಟಿ ನೀಡಿದ್ದೇನೆ ಎಂದರು. ತಮ್ಮ ಹಾಗೂ ಪಕ್ಷದ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಬಿಜೆಪಿ ನಾಯಕರು ಬಗೆಹರಿಸುತ್ತಾರೆ ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.
ಪಶುಪತಿ ಕುಮಾರ್ ಪರಸ್ ಅವರ ಮೌನ ಖಂಡಿತವಾಗಿಯೂ ನೋವುಂಟು ಮಾಡುತ್ತದೆ. ನನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ಮತ್ತು ನಾನು ಬಿಜೆಪಿಗೆ ಬಂಡೆಯಂತೆ ನಿಂತಿದ್ದೆವು. ಆದರೆ ಇಂತಹ ಕಷ್ಟದ ಸಮಯದಲ್ಲಿ ನಾನು ಅವರ ಬೆಂಬಲ ನಿರೀಕ್ಷಿಸಿದಾಗ ಅವರ ಇಲ್ಲ ಎನ್ನುವುದಿಲ್ಲ ಎಂದಿರುವ ಚಿರಾಗ್, ಜುಲೈ 5 ರಿಂದ ಬಿಹಾರದ ಹಾಜಿಪುರದಿಂದ ಆಶಿರ್ವಾದ್ ಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದಾರೆ. ಇದರ ನಡುವೆಯೇ ಪಾಸ್ವಾನ್ ಗುಜರಾತ್ ಪ್ರವಾಸ ಭಾರಿ ಕುತೂಹಲ ಮೂಡಿಸಿದ್ದು, ಎಲ್‌ಜೆಪಿಯಲ್ಲಿನ ಡ್ಯಾಮೇಜ್ ಕಂಟ್ರೋಲ್‌ಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಕೇಂದ್ರದ ಮಾಜಿ ಸಚಿವ ಮತ್ತು ಎಲ್‌ಜೆಪಿ ಸಂಸ್ಥಾಪಕ ದಿ.ರಾಮ್‌ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಅವರನ್ನು ಇತ್ತೀಚೆಗೆ ಅವರ ಚಿಕ್ಕಪ್ಪ ಮತ್ತು ಹಾಜಿಪುರ ಸಂಸದ ಪಶುಪತಿ ಕುಮಾರ್ ಪರಾಸ್ ನೇತೃತ್ವದ ಎಲ್‌ಜೆಪಿಯ ಒಂದು ಬಣವು ಪಕ್ಷದ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿತ್ತು. ಈ ಬೆಳವಣಿಗೆಯ ನಂತರ ಎಲ್‌ಜೆಪಿಯ ಐವರು ಬಂಡಾಯ ಸಂಸದರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಚಿರಾಗ್ ತಿರುಗೇಟು ನೀಡಿದ್ದರು. ಮಾತ್ರವಲ್ಲದೆ ಪಕ್ಷದ ಬಗ್ಗೆ ಇವರಿಗಿದ್ದ ಪ್ರಮಾಣಿಕತೆಯನ್ನು ಪ್ರಶ್ನಿಸಿದ್ದರು. ಚಿರಾಗ್ ನಾಯಕತ್ವದ ಬಗ್ಗೆ ಅವರ ಪರಸ್ ಸೇರಿದಂತೆ ಆರು ಮಂದಿ ಸಂಸದರು ಬಂಡಾಯದ ಕಹಳೆ ಮೊಳಗಿಸಿದ್ದರು.