ಬೀಜಿಂಗ್(ಚೀನಾ): ಪಾಕಿಸ್ತಾನದ ಮೇಲೆ ಚೀನಾ ನಂಬಿಕೆ ಕಳೆದುಕೊಳ್ಳುತ್ತಿದೆ ಎಂಬ ಅನುಮಾನಕ್ಕೆ ಪುಷ್ಠಿ ನೀಡುವ ಘಟನೆಯೊಂದು ನಡೆದಿದೆ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪೆಕ್)ನಲ್ಲಿ ಕೆಲಸ ಮಾಡುವ ಸಾವಿರಾರು ಪಾಕ್ ನೌಕರರನ್ನು ಚೀನಾ ವಜಾಗೊಳಿಸಿದೆ.
ಭಯೋತ್ಪಾದಕರ ಕೃತ್ಯಗಳಿಂದ ಚೀನಾದವರನ್ನು ರಕ್ಷಣೆ ಮಾಡಲು ಪಾಕ್ ವಿಫಲವಾಗುತ್ತಿದೆ ಎಂಬ ಆರೋಪದ ಮೇಲೆ ಸಿಪೆಕ್ನ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಎರಡೂವರೆ ಸಾವಿರ ಪಾಕ್ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.
ಬಸ್ನಲ್ಲಿ ಬಾಂಬ್ ಇಟ್ಟು ಚೀನಿ ಪ್ರಜೆಗಳನ್ನು ಕೊಂದ ಪ್ರತೀಕಾರದ ಸಲುವಾಗಿ ಚೀನಾ ಈ ರೀತಿಯ ಪ್ರತೀಕಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಚೀನಾ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ಜಿಯೋ ನ್ಯೂಸ್ (Geo news) ವರದಿ ಮಾಡಿದೆ.
ಜು.14ರಂದು ಬಸ್ನಲ್ಲಿ ಭೀಕರ ಸ್ಫೋಟವೊಂದು ಸಂಭವಿಸಿ, ಚೀನಾದ 9 ಪ್ರಜೆಗಳೂ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ ಘಟನೆ ಈಶಾನ್ಯ ಪಾಕಿಸ್ತಾನದಲ್ಲಿ ನಡೆದಿತ್ತು. ದಸು ಜಲವಿದ್ಯುತ್ ಯೋಜನೆಯ ಡ್ಯಾಮ್ಗಾಗಿ ಕಾರ್ಯನಿರ್ವಹಿಸಲು ತೆರಳುತ್ತಿದ್ದ ಚೀನಾದ ಇಂಜಿನಿಯರ್ಗಳು, ಸರ್ವೇಯರ್ಗಳು ಸ್ಫೋಟದಲ್ಲಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಚೀನಾ ಸೈಬರ್ ದಾಳಿಕೋರರಿಂದ Microsoft ಇಮೇಲ್ ಹ್ಯಾಕ್: ಅಮೆರಿಕ ಆರೋಪ
ಮೊದಲಿಗೆ ಇದು ಭಯೋತ್ಪಾದಕ ದಾಳಿಯೋ ಅಥವಾ ಅಲ್ಲವೋ ಎಂಬ ಬಗ್ಗೆ ಅನುಮಾನಗಳು ಮೂಡಿತ್ತಾದರೂ, ನಂತರ ಇದು ಭಯೋತ್ಪಾದಕರ ದಾಳಿ ಎಂಬುದನ್ನು ಪಾಕ್ ಒಪ್ಪಿಕೊಂಡಿತ್ತು. ಈಗ ಪಾಕಿಸ್ತಾನದ ನೌಕರರನ್ನು ವಜಾ ಮಾಡುವ ಮೂಲಕ ಚೀನಾ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಲಾಗ್ತಿದೆ.