ತಿರುವನಂತಪುರ: ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ನೀಡಿರುವುದು ತೈವಾನ್‌ನಂತಹ ಪ್ರಜಾಸತ್ತಾತ್ಮಕ ಮಿತ್ರನನ್ನು ಅಮೆರಿಕ ಕೈಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನ ಚೀನಾಕ್ಕೆ ನೀಡಿದೆ ಎಂದು ಯುಎಸ್‌ನಲ್ಲಿರುವ ಮಾಜಿ ಭಾರತೀಯ ರಾಯಭಾರಿ ಮತ್ತು ಬಾಹ್ಯ ವ್ಯವಹಾರಗಳ ತಜ್ಞರು ಹೇಳಿದ್ದಾರೆ.
ಆದರೆ, ಚೀನಾ ಮಾತ್ರ ತೈವಾನ್ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದು, ಈ ಭೇಟಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮಾಜಿ ರಾಜತಾಂತ್ರಿಕ ಅಧಿಕಾರಿ ಟಿ ಪಿ ಶ್ರೀನಿವಾಸನ್ ಹೇಳಿದರು. 'ನ್ಯಾನ್ಸಿ ಪೆಲೋಸಿ ಅವರ ಭೇಟಿಯ ಸಮಯದಲ್ಲಿ ಚೀನಾದ ಯುದ್ಧ ವಿಮಾನಗಳು ತೈವಾನ್ ಅನ್ನು ಸುತ್ತುವರೆದಿರುವುದು ತನ್ನ ಪ್ರಬಲ ಪ್ರದರ್ಶನ ತೋರಿಸಲು ಚೀನಾ ಸಜ್ಜಾಗಿದೆ ಎಂಬುದನ್ನ ಸ್ಪಷ್ಟಪಡಿಸಿದೆ.
ತೈವಾನ್, ಈ ವಿಮಾನಗಳನ್ನು ಹೊಡೆದುರುಳಿಸಬಹುದು. ಆದರೆ, ಅವರು ಚೀನಾದೊಂದಿಗೆ ಯುದ್ಧದಲ್ಲಿ ತೊಡಗಲು ನಿರಾಕರಿಸಿದ ಹಿನ್ನೆಲೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಡಾ. ಟಿ ಪಿ ಶ್ರೀನಿವಾಸನ್ 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್‌ಗೆ ಚೀನಾ ದಾಳಿ ಕುರಿತು ಹೆಚ್ಚು ಆತಂಕ ಮೂಡುತ್ತಿದೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದಂತೆಯೇ ಏನಾದರೂ ತೈವಾನ್ ಮೇಲೆ ದಾಳಿ ಸಂಭವಿಸಿದರೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಉಕ್ರೇನ್ ಆಕ್ರಮಣದ ವಿರುದ್ಧ ಅಮೆರಿಕದಿಂದ ರಷ್ಯಾಕ್ಕೆ ಆರ್ಥಿಕ ನಿರ್ಬಂಧಗಳು ಮತ್ತು ಬೆದರಿಕೆ ಸಂದೇಶಗಳನ್ನ ರವಾನಿಸಲಾಗಿತ್ತು. ಆದರೆ ಉಕ್ರೇನ್ ದಾಳಿ ಕುರಿತಂತೆ ರಷ್ಯಾವನ್ನ ಮನವೊಲಿಸುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ಹೇಳಿದರು.
ರಷ್ಯಾದ ಮೇಲೆ ಹೇರಿದ್ದ ತೈಲ ಆಮದು ನಿಷೇಧವೂ ವಿಫಲವಾಗಿದ್ದು, ಯುರೋಪಿಯನ್ ರಾಷ್ಟ್ರಗಳು ಈಗ ರಷ್ಯಾದಿಂದ ನೇರವಾಗಿ ತೈಲವನ್ನು ಖರೀದಿಸುತ್ತಿವೆ. ರಷ್ಯಾ ಈಗಾಗಲೇ ಉಕ್ರೇನ್‌ನಲ್ಲಿ ತಮಗೆ ಬೇಕಾದ ಪ್ರದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇದು ಅಮೆರಿಕದ ಚಿತ್ರಣಕ್ಕೆ ಧಕ್ಕೆ ತಂದಿದೆ. ಈ ಮುಜುಗರದಿಂದ ಹೊರಬರಲು ತೈವಾನ್ ಭೇಟಿಯನ್ನು ಗಿಮಿಕ್ ಎಂದು ಕೂಡ ಅರ್ಥೈಸಬಹುದು ಎಂದರು.
ಉಕ್ರೇನ್ ಆಕ್ರಮಣದಲ್ಲಿ ಚೀನಾ ರಷ್ಯಾವನ್ನು ಬೆಂಬಲಿಸುತ್ತದೆ ಮತ್ತು ತೈವಾನ್ ಆಕ್ರಮಣಕ್ಕಾಗಿ ರಷ್ಯಾ, ಚೀನಾವನ್ನು ಬೆಂಬಲಿಸುತ್ತದೆ ಎಂದು ಉಕ್ರೇನ್ ಯುದ್ಧದ ಮೊದಲೇ ಚೀನಾ ಮತ್ತು ರಷ್ಯಾ ಒಪ್ಪಂದಕ್ಕೆ ಬಂದಿವೆ. ಚೀನಾ ತೈವಾನ್ ಮೇಲೆ ಆಕ್ರಮಣ ಮಾಡಲು ನಿರ್ಧರಿಸಿದರೆ, ಅಮೆರಿಕ ತೈವಾನ್ ಜೊತೆ ನಿಲ್ಲುತ್ತದೆ ಎಂದು ಅಮೆರಿಕ ಈಗಾಗಲೇ ಸ್ಪಷ್ಟವಾಗಿ ಸೂಚಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ತೈವಾನ್ ಸುತ್ತ ತೀವ್ರಗೊಂಡ ಚೀನಾ ಮಿಲಿಟರಿ ಕಾರ್ಯಾಚರಣೆ