ಪಣಜಿ (ಗೋವಾ) : ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್ ಅವರನ್ನು ಶುಕ್ರವಾರ ಗೋವಾ ಪೊಲೀಸರು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಅವರು ತಂಗಿದ್ದ ಅಪಾರ್ಟ್‌ಮೆಂಟ್‌ಗೆ ಕರೆದೊಯ್ಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ ಇದು ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸುಚನಾ ಸೇಠ್ (39) ಜನವರಿ 6 ರಂದು ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಜನವರಿ 8 ರವರೆಗೆ ವಾಸವಾಗಿದ್ದರು. ಅಲ್ಲಿಂದ ಮಗುವನ್ನ ಕಾರಿನ ಲಗೇಜ್ನಲ್ಲಿ ಇಟ್ಟು ಬೆಂಗಳೂರಿನತ್ತ ಸಾಗುತ್ತಿದ್ದಾಗ, ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸರು ಆಕೆಯನ್ನು ಸೋಮವಾರ ರಾತ್ರಿ ಬಂಧಿಸಿದ್ದರು. ನಂತರ ಮಂಗಳವಾರ ಗೋವಾಕ್ಕೆ ಕರೆತರಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಚಾರಣೆಯ ವೇಳೆ ತಾನು ಎದುರಿಸಿದ ಸಂಕಷ್ಟದ ದಾಂಪತ್ಯದ ಬಗ್ಗೆ ಸೇಠ್ ಹೇಳಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಗು ಕೊಲೆ ಆರೋಪದ ಮೇಲೆ ಅವರು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು. ಆದರೆ, ಅಧಿಕಾರಿಗಳು ಇನ್ನೂ ಕೊಲೆಯ ಹಿಂದಿನ ಸ್ಪಷ್ಟ ಉದ್ದೇಶವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ "ಅಪರಾಧದ ದೃಶ್ಯದ ಮರುಸೃಷ್ಠಿ" ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಸಿರುಗಟ್ಟಿಸಿ ಸಾಯಿಸಿರುವ ಶಂಕೆ: ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆಯು ಮಗುವನ್ನು ಉಸಿರುಗಟ್ಟಿಸಿ ಸಾಯಿಸಿರುವ ಸಾಧ್ಯತೆಯನ್ನು ಸೂಚಿಸಿದೆ. ಸಾವಿನ ವೇಳೆ ಯಾವುದೇ ಒದ್ದಾಟದ ಲಕ್ಷಣಗಳು ಕಂಡುಬಂದಿಲ್ಲ. ಜಕಾರ್ತ (ಇಂಡೋನೇಷಿಯಾ)ದಲ್ಲಿರುವ ಮಗುವಿನ ತಂದೆ ವೆಂಕಟ್ ರಾಮನ್ ಮಂಗಳವಾರ ರಾತ್ರಿ ಚಿತ್ರದುರ್ಗದ ಹಿರಿಯೂರಿಗೆ ತಲುಪಿ ಮರಣೋತ್ತರ ಪರೀಕ್ಷೆಯ ನಂತರ ಮಗನ ಶವವನ್ನು ಪಡೆದುಕೊಂಡಿದ್ದರು. ಮಗುವಿನ ಮೃತದೇಹವನ್ನು ಅವರ ತಂದೆ ಬುಧವಾರ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಎರಡು ಖಾಲಿ ಕೆಮ್ಮಿನ ಸಿರಪ್ ಬಾಟಲ್ ಪತ್ತೆ: ಇದೇ ವೇಳೆ ಸಿಇಒ ತಂಗಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಖಾಲಿ ಕೆಮ್ಮಿನ ಸಿರಪ್ ಬಾಟಲ್ಗಳು ಪತ್ತೆಯಾಗಿವೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಗುವನ್ನು ಸಾಯಿಸಲು ಹೆಚ್ಚಿನ ಪ್ರಮಾಣದ ಔಷಧ ನೀಡಿರಬಹುದು. ಇದು ಪೂರ್ವ ಯೋಜಿತ ಕೊಲೆಯಂತೆ ಕಂಡು ಬರುತ್ತದೆ. ಆಕೆಯ ಮಾನಸಿಕ ಸ್ಥಿತಿಯನ್ನು ನಿರ್ಣಯಿಸಲು ಮತ್ತು ಘೋರ ಅಪರಾಧದ ಉದ್ದೇಶವನ್ನು ಕಂಡುಹಿಡಿಯಲು ಆಕೆಯನ್ನು ಮಾನಸಿಕ ಪರೀಕ್ಷೆಗಳಿಗೆ ಒಳಪಡಿಸಲಾಯಿತು ಎಂದು ಗೋವಾ ಪೊಲೀಸರು ಬುಧವಾರ ಹೇಳಿದ್ದರು.
ಇದನ್ನೂ ಓದಿ: ಮಗುವಿನ ಹತ್ಯೆ ಪ್ರಕರಣ; ಸುಚನಾ ಸೇಠ್ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಕಚೇರಿಗೆ ಗೋವಾ ಪೊಲೀಸರ ಭೇಟಿ