ನವದೆಹಲಿ : ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ವಿಧೇಯಕ -2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆ ಮಹಿಳೆಯರ ಮದುವೆಯ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದೆ.
ಪ್ರತಿಪಕ್ಷಗಳ ವಿರೋಧದ ನಡುವೆಯೂ ಸಚಿವೆ ಸ್ಮೃತಿ ಇರಾನಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ವಿಧೇಯಕ ಮಂಡಿಸಿದರು. ಈ ತಿದ್ದುಪಡಿ ವಿಧೇಯಕವು ಮಹಿಳೆಯರ ವಿವಾಹದ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವ ಹೊಂದಿದೆ.
ಸಮಾನತೆಯ ದೃಷ್ಟಿಯಿಂದ ಮಸೂದೆ ಮಂಡನೆ
ಸಂಸತ್ನ ಕೆಳಮನೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದ ಇರಾನಿ, ನಮ್ಮ ದೇಶದಲ್ಲಿ ಮಹಿಳಾ ಸಮಾನತೆ ತರಬೇಕಾದ ಅವಶ್ಯಕತೆ ಇದೆ. ಇದೇ ದೃಷ್ಟಿಕೋನದಲ್ಲಿ ಈ ತಿದ್ದುಪಡಿಯನ್ನ ನೋಡಬೇಕಿದೆ. ವಿಭಿನ್ನ ನಂಬಿಕೆಗಳ ವಿಭಿನ್ನ ವಿವಾಹ ಕಾನೂನುಗಳು ಇರುವ ಹಿನ್ನೆಲೆಯಲ್ಲಿ ತಿದ್ದುಪಡಿಯನ್ನು ಪರಿಚಯಿಸಲು ಬಯಸುತ್ತಿದ್ದೇನೆ ಎಂದು ಸಚಿವರು ವಿಧೇಯಕ ಮಂಡನೆಯನ್ನು ಸಮರ್ಥಿಸಿಕೊಂಡರು.
ಆದರೆ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ತೃಣಮೂಲ ಕಾಂಗ್ರೆಸ್‌ನ ಸೌಗತ ರಾಯ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಮಸೂದೆಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.
ತಿದ್ದುಪಡಿ ಪರಿಚಯಿಸುವ ಮೊದಲು ಸರ್ಕಾರವು ಯಾವುದೇ ಪ್ರಕ್ರಿಯೆಗಳನ್ನು ನಡೆಸಿಲ್ಲ, ಯಾರನ್ನೂ ಸಂಪರ್ಕಿಸಿಲ್ಲ. ಹೀಗಾಗಿ ಇದಕ್ಕೆ ನಮ್ಮ ವಿರೋಧ ಇದ್ದು, ವಿಧೇಯಕವನ್ನು ಸ್ಥಾಯಿ ಸಮಿತಿಗೆ ಕಳುಹಿಸಲು ನಾವು ಒತ್ತಾಯಿಸುತ್ತೇವೆ ಎಂದರು.
ವಿಧೇಯಕ ಸಮರ್ಥಿಸಿಕೊಂಡ ಸಚಿವೆ
ಪ್ರತಿಪಕ್ಷಗಳನ್ನು ಸಂಪರ್ಕಿಸದೇ ಸರ್ಕಾರ ವಿಧೇಯಕ ಮಂಡನೆಗೆ ಮುಂದಾಗಿದೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವೆ ಇರಾನಿ, ಪುರುಷ ಮತ್ತು ಮಹಿಳೆಯರಿಗೆ ವೈವಾಹಿಕ ಸಂಬಂಧದಲ್ಲಿ ಸಮಾನ ಹಕ್ಕುಗಳ ಅಗತ್ಯವಿದೆ. ಈ ತಿದ್ದುಪಡಿಯು 21ನೇ ವಯಸ್ಸಿನಲ್ಲಿ ಮದುವೆಯಾಗಲು ಅವಕಾಶ ನೀಡುತ್ತದೆ. ಈ ವೇಳೆ ಪುರುಷರು ಮತ್ತು ಮಹಿಳೆಯರಲ್ಲಿ ಭೇದ ಭಾವ ಮಾಡುವುದಿಲ್ಲ. ಪ್ರಸ್ತುತ ನಾವು ಬಾಲ್ಯ ವಿವಾಹ ತಡೆಯುವ ಅಗತ್ಯತೆ ಇದೆ. ಅಪ್ರಾಪ್ತರು ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರಾಗುತ್ತಿದ್ದಾರೆ. ಹೀಗಾಗಿ ಹೊಸ ಕಾನೂನಿನ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೊಗೊಯ್ , ಕಾನೂನು ಆಯೋಗ ಕೂಡ ವಿಧೇಯಕದ ಬಗ್ಗೆ ಆಕ್ಷೇಪಣೆಗಳನ್ನು ಹೊಂದಿದ್ದು, ಅದನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಪಟ್ಟು ಹಿಡಿದರು. ತರಾತುರಿಯಲ್ಲಿ ಮಂಡಿಸಿದ ಮಸೂದೆಯನ್ನು ವಿರೋಧಿಸುವುದಾಗಿ ರಾಯ್ ಹೇಳಿದರು.
ಇದು ಮೂಲ ಹಕ್ಕುಗಳ ಉಲ್ಲಂಘನೆ ಎಂದ ಓವೈಸಿ
ಇನ್ನು ಅಸಾದುದ್ದೀನ ಓವೈಸಿ ಮಾತನಾಡಿ, ಈ ವಿಧೇಯಕ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕಪಡಿಸಿದರು. 18 ವರ್ಷದ ಯುವಕ ಮತದಾನ ಮಾಡಬಹುದಾದರೆ ಮದುವೆಯಾಗಲು ಸಾಧ್ಯವಿಲ್ಲವೇ? ನಿಮ್ಮ ‘ಬೇಟಿ ಬಚಾವೋ ಕಾರ್ಯಕ್ರಮ ಎಲ್ಲಿಗೆ ಹೋಯ್ತು ಎಂದು ಪ್ರಶ್ನಿಸಿದರು.