ಪಾಣಿಪತ್ (ಹರಿಯಾಣ): ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. 13 ವರ್ಷದ ಬಾಲಕನೊಬ್ಬ ಆಟವಾಡುತ್ತಿದ್ದ ವೇಳೆ ನೇಣು ಬಿಗಿದು ಸಾವಿಗೀಡಾದ ದುರಂತ ಸಂಭವಿಸಿದೆ. ನಜೀಂ ರಾಜಾ (13) ಎಂಬಾತನೇ ಮೃತ ಎಂದು ಗುರುತಿಸಲಾಗಿದೆ.
ಪಶ್ಚಿಮ ಬಂಗಾಳದ ಇಸ್ಲಾಂಪುರ ಪ್ರದೇಶದ ಕೌಸರ್ ಎಂಬುವವರ ಕುಟುಂಬ ವಲಸೆ ಬಂದು ಹರಿಯಾಣದ ಪಾಣಿಪತ್ ಜಿಲ್ಲೆಯ ಭಾಲ್ಸಿ ಗ್ರಾಮದಲ್ಲಿ ನೆಲೆಸಿದೆ. ಅಲ್ಲಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಕೌಸರ್ ಅವರಿಗೆ ಪತ್ನಿ ನರ್ಗೀಸ್ ಮತ್ತು ಮೂವರು ಮಕ್ಕಳಿದ್ದಾರೆ. ಆದರೆ, ಕೆಲಸಕ್ಕೆ ಹೋದಾಗ ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಮಾತ್ರ ಇದ್ದರು.
ಮನೆಯಲ್ಲಿದ್ದ ಹಿರಿಯ ಮಗ ನಜೀಂ ರಾಜಾ ತನ್ನ ತಾಯಿಯ ಮಾತು ಕೇಳದೇ ಆಟವಾಡಲು ಎಂದು ಹೋಗಿದ್ದ. ಈ ವೇಳೆ ಖಾಲಿ ಕೋಣೆಯಲ್ಲಿ ಸೀಲಿಂಗ್‌ನಿಂದ ನೇತಾಡುತ್ತಿದ್ದ ಬಟ್ಟೆಯ ಬಲೆಗೆ ಬಿದ್ದು ನಜೀಂ ಪ್ರಾಣ ಕಳೆದುಕೊಂಡಿದ್ದಾನೆ. ನಂತರ ಎಷ್ಟು ಹೊತ್ತಾದರೂ ನಜೀಂ ಮನೆಗೆ ಬಾರದೇ ಇದ್ದುದರಿಂದ ತಾಯಿ ನರ್ಗೀಸ್ ಹುಡುಕಾಡಲು ಆರಂಭಿಸಿದ್ದಾರೆ. ಈ ವೇಳೆ, ಖಾಲಿಯ ಕೋಣೆಯಲ್ಲಿ ನಜೀಂ ಬಟ್ಟೆಯ ಬಲೆಗೆ ಬಿದ್ದಿರುವ ಮತ್ತೊಬ್ಬ ಮಗ ನೋಡಿ, ತಾಯಿಗೆ ವಿಷಯ ತಿಳಿಸಿದ್ದಾನೆ.
ಇತ್ತ, ಸೀಲಿಂಗ್‌ಗೆ ನೇತಾಡುವ ಬಟ್ಟೆಯ ಕುಣಿಕೆಗೆ ಮಗ ರಾಜಾ ನಜೀಂ ಬಿದ್ದಿರುವ ವಿಷಯ ತಿಳಿದ ತಾಯಿ ನರ್ಗೀಸ್ ಓಡಿ ಬಂದಿದ್ದಾರೆ. ಆಗ ಮಗ ನಜೀಂ ಇನ್ನೂ ಉಸಿರಾಡುತ್ತಿದ್ದ. ತಕ್ಷಣವೇ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸಕ್ಕರೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಮೂರನೇ ಮಹಡಿಯಿಂದ ಜಿಗಿದು ಎಂಜಿನಿಯರ್ ಸಾವು