ಛೋಟಾ ಉದೇಪುರ್ (ಗುಜರಾತ್): ರಾಜ್ಯದ ಛೋಟಾಉದೇಪುರ್ ಜಿಲ್ಲೆಯ ಬೋಡೆಲಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 11,000 ರೂ. ದಂಡ ವಿಧಿಸಿದೆ. ಛೋಟಾ ಉದೇಪುರ್ ನ್ಯಾಯಾಲಯದಲ್ಲಿ 11 ಆರೋಪಿಗಳಿಗೆ ಏಕಕಾಲದಲ್ಲಿ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.
ಏನಿದು ಪ್ರಕರಣ: 2018ರ ಜೂನ್ 16 ರಂದು, ಛೋಟಾ ಉದೇಪುರ್ ಜಿಲ್ಲೆಯ ಸಂಖೆಡಾ ತಾಲೂಕಿನ ರಾಯಪುರ ಗ್ರಾಮದಲ್ಲಿ, ವಿನೋದ್ ಭಾಯ್ ಬಾರಿಯಾ ಮತ್ತು ಛಗನ್ ಭಾಯ್ ಬಾರಿಯಾ ನಡುವೆ ಕೆಲ ಕೆಲಸದ ವಿಚಾರವಾಗಿ ಜಗಳ ನಡೆದಿತ್ತು. ಛಗನ್ ಭಾಯ್ ಸೇರಿ ಒಟ್ಟು 13 ಜನರು ವಿನೋದ್ ಭಾಯ್ ಮೇಲೆ ಹಲ್ಲೆ ನಡೆಸಿದ್ದರು. ಈ ಗಲಾಟೆಯಲ್ಲಿ ಗಾಯಗೊಂಡಿದ್ದ ವಿನೋದ್ ಭಾಯ್ ಬಾರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವಿನೋದ್ ಭಾಯ್ ಬಾರಿಯಾ ಕೊಲೆ ಮಾಡಿರುವುದಾಗಿ ಅವರ ಪತ್ನಿ ಸಂಖೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 147, 148, 149, 294 (ಬಿ) 302, 452, 506 ಅಡಿ ಪ್ರಕರಣ ದಾಖಲಿಸಿಕೊಂಡು ಎಲ್ಲ ಆರೋಪಿಗಳನ್ನು ಬಂಧಿಸಿದ್ದರು.
ಒಂದೇ ಕುಟುಂಬದ 11 ಆರೋಪಿಗಳಿಗೆ ಶಿಕ್ಷೆ: ಬೋಡೆಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಂದಳಿತ್ ತಿವಾರಿ ಅವರೆದುರು ಈ ಪ್ರಕರಣದ ವಿಚಾರಣೆ ಬಂದಿತ್ತು, ಪ್ರಮುಖ ಸಾಕ್ಷಿಗಳು ಮತ್ತು ಸರ್ಕಾರಿ ವಕೀಲ ರಾಜೇಂದ್ರ ಪರ್ಮಾರ್ ಅವರ ವಾದವನ್ನು ಪರಿಗಣಿಸಿ ಒಟ್ಟು 11 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಯಿತು. ಜೀವಾವಧಿ ಶಿಕ್ಷೆ ಜೊತೆಗೆ 11 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ಘೋಷಿಸಿದರು.
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ: ಸರ್ಕಾರಿ ವಕೀಲ ರಾಜೇಂದ್ರ ಪರ್ಮಾರ್ ಮಾತನಾಡಿ, ಈ ಪ್ರಕರಣದಲ್ಲಿ ನ್ಯಾಯಾಲಯ ನನ್ನ ವಾದವನ್ನು ಒಪ್ಪಿಕೊಂಡಿತು. ಛೋಟಾ ಉದೇಪುರ್ ಜಿಲ್ಲೆಯಲ್ಲಿ 11 ಆರೋಪಿಗಳಿಗೆ ಒಟ್ಟಿಗೆ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ. ನ್ಯಾಯಾಲಯ 11 ಆರೋಪಿಗಳಿಗೆ ಶಿಕ್ಷೆ ವಿಧಿಸಿರುವುದು ಸಮಾಜಕ್ಕೆ ಒಂದು ಉದಾಹರಣೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: 'ಋತುಚಕ್ರ ರಜೆ ಅಗತ್ಯವಿಲ್ಲ': ಸ್ಮೃತಿ ಇರಾನಿ ಹೇಳಿಕೆ ಬೆಂಬಲಿಸಿದ ಕಂಗನಾ ರಣಾವತ್
'ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಹೆಚ್ಚಿತು': ಮೃತ ವಿನೋದ್ ಭಾಯ್ ಬಾರಿಯಾ ಅವರ ಪತ್ನಿ ಮೀನಾಬೆನ್ ಬಾರಿಯಾ ಮಾತನಾಡಿ, 2018ರಲ್ಲಿ ಆರೋಪಿಗಳು ನನ್ನ ಪತಿಯನ್ನು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಐದು ವರ್ಷಗಳ ಕಾಲ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಿದೆ. ಕೊನೆಗೂ ನ್ಯಾಯಾಲಯ ನನಗೆ ನ್ಯಾಯ ನೀಡಿದೆ. ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲಿನ ನನ್ನ ನಂಬಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಪ್ರಮಾಣವಚನಕ್ಕೂ ಮುನ್ನ ಭಜನ್‌ಲಾಲ್ ಶರ್ಮಾ ಪೂಜೆ, ಪ್ರಾರ್ಥನೆ