ಮುಂಬೈ (ಮಹಾರಾಷ್ಟ್ರ): ವಿದೇಶದಲ್ಲಿ ಅಡಗಿದ್ದ ಛೋಟಾ ರಾಜನ್ ಆಪ್ತನನ್ನು ಭಾರತಕ್ಕೆ ಕರೆತರುವಲ್ಲಿ ದೇಶದ ತನಿಖಾ ಸಂಸ್ಥೆಗಳು ಯಶಸ್ವಿಯಾಗಿವೆ. ಭೂಗತ ಪಾತಕಿಯ ಆಪ್ತ ಸಂತೋಷ್ ಸಾವಂತ್ ಅಲಿಯಾಸ್ ಅಬು ಸಾವಂತ್‌ನನ್ನು ಸಿಂಗಾಪುರದಿಂದ ಗಡಿಪಾರು ಮಾಡಿಸಿ ಭಾರತಕ್ಕೆ ಕರೆತರಲಾಗಿದೆ. ಸಿಬಿಐ ಮತ್ತು ಮುಂಬೈ ಕ್ರೈಂ ಬ್ರಾಂಚ್ ಜಂಟಿ ಕಾರ್ಯಾಚರಣೆ ನಡೆಸಿ ಕರೆತಂದಿದ್ದಾರೆ. ಅಬು ಸಾವಂತ್‌ನನ್ನು ದೆಹಲಿಯಲ್ಲಿ ಸಿಬಿಐ ಬಂಧಿಸಿತು.
ಸಂತೋಷ್ ಸಾವಂತ್ ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನನ್ನು ಸಿಬಿಐ ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಈ ಬೆಳವಣಿಗೆಯಿಂದ ಛೋಟಾ ರಾಜನ್ ಸಂಕಷ್ಟಕ್ಕೆ ಸಿಲುಕಲಿದ್ದಾನೆ.
2010ರಲ್ಲಿಯೇ ಸಿಂಗಾಪುರದಲ್ಲಿ ಹೊಟೇಲ್ ನಡೆಸುತ್ತಿದ್ದ ಸಾವಂತ್ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿತ್ತು. ಕೆಲವು ಆಡಳಿತಾತ್ಮಕ ಪ್ರಕ್ರಿಯಿಂದಾಗಿ ಪ್ರಕ್ರಿಯೆ ವಿಳಂಬವಾಗಿತ್ತು. ಸಾವಂತ್ ವಿರುದ್ಧ ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಆರು ಪ್ರಕರಣಗಳು ಬಾಕಿ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಲಕ್ ನಗರದ ರಿಯಲ್ ಎಸ್ಟೇಟ್ ಏಜೆಂಟ್ ಮಗನಾಗಿರುವ ಸಾವಂತ್, ಆಸ್ತಿ ವ್ಯವಹಾರದ ಸಂಬಂಧ ರಾಜನ್‌ನನ್ನು ಭೇಟಿಯಾಗಿದ್ದ. ಆತನ ಗ್ಯಾಂಗ್‌ನಲ್ಲಿ ಬಹುಬೇಗ ಗುರುತಿಸಿಕೊಂಡಿದ್ದ. ನಂತರ ಹಣಕಾಸು ನಿರ್ವಹಣೆ, ಬಿಲ್ಡರ್‌ಗಳನ್ನು ಬೆದರಿಸುವುದು, ಅಧಿಕಾರಿಗಳ ಮೇಲೆ ಒತ್ತಡ ಹೇರುವುದು ಮತ್ತು ಛೋಟಾ ರಾಜನ್‌ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ. 2006ರಲ್ಲಿ ಸಾವಂತ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಮಂಗಳವಾರ ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನ್ ಸಿಬಿಐನ ನೋಡಲ್ ಅಧಿಕಾರಿಗೆ ಸಾವಂತ್‌ನನ್ನು ಗಡಿಪಾರು ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿತ್ತು.
ಸಾವಂತ್ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ, ಸಿಬಿಐ 2006 ರ ಸುಲಿಗೆ ಪ್ರಕರಣ ಸಂಬಂಧ ಆತನನ್ನು ಕಸ್ಟಡಿಗೆ ತೆಗೆದುಕೊಂಡಿದೆ. 2015ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ರಾಜನ್‌ನನ್ನು ಗಡೀಪಾರು ಮಾಡಿದ ನಂತರ, ಸರ್ಕಾರವು ಆತನ ಎಲ್ಲ 71 ಅಪರಾಧಗಳನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಸಾವಂತ್ ಕುಟುಂಬ ಸಿಂಗಾಪುರದ ಲಿಟಲ್ ಇಂಡಿಯಾದಲ್ಲಿ ವಾಸವಾಗಿದ್ದು, ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈತ ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿರುವ ರಾಜನ್ ಆಸ್ತಿಗಳನ್ನು ನೋಡಿಕೊಳ್ಳುತ್ತಿದ್ದ ಎಂದು ಸಿಬಿಐ ತಿಳಿಸಿದೆ.
ಛೋಟಾ ರಾಜನ್‌ನ ಅಪರಾಧ ಚಟುವಟಿಕೆಗಳ ತನಿಖೆಯಲ್ಲಿ ಸಾವಂತ್‌ನ ಗಡಿಪಾರು ಮಹತ್ವದ ಬೆಳವಣಿಗೆಯಾಗಿದೆ. ಆತನ ಬಂಧನವು ಗ್ಯಾಂಗ್‌ನ ಹಣಕಾಸಿನ ವ್ಯವಹಾರಗಳು ಮತ್ತು ಇತರ ಅಪರಾಧ ಚಟುವಟಿಕೆಗಳ ಸಂಬಂಧಿಸಿದ ಮಹತ್ವದ ಮಾಹಿತಿ ಬಹಿರಂಗವಾಗಲಿದೆ. ಈ ಪ್ರಕರಣವು ಅಂತಾರಾಷ್ಟ್ರೀಯ ಸಂಘಟಿತ ಅಪರಾಧದ ವಿರುದ್ಧದ ಹೋರಾಟದಲ್ಲಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮನ್ವಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: ಜಾಮ್ತಾರಾ ಗ್ಯಾಂಗ್‌ನ 6 ಜನರ ಬಂಧನ: 21 ಸಾವಿರ ಸಿಮ್ ಕಾರ್ಡ್ ವಶ!