ರಾಜನಂದಗಾಂವ್ (ಛತ್ತೀಸ್‌ಗಢ): ಯುವತಿಯ ಸೋಗಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬನಿಗೆ ವಂಚಿಸಿ, ಬಳಿಕ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಛತ್ತೀಸ್ಗಢದ ಮೇಧಾ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಎಲ್ಬಿ ನಗರ ನಿವಾಸಿ ಕೋಮೇಶ್ ಸಾಹು ಎಂದು ಗುರುತಿಸಲಾಗಿದೆ.
ಇಲ್ಲಿನ ಮೇಧಾ ಗ್ರಾಮದಲ್ಲಿ ಕೋಮೇಶ್ ಸಾಹು ಎಂಬವರನ್ನು ಚೂರಿ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಮತ್ತು ಕೋಮೇಶ್ನ ಬ್ಯಾಂಕ್ ಖಾತೆಗಳ ವಿವರವನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಕೋಮೇಶ್ ಸಾಹು ಮತ್ತೋರ್ವ ವ್ಯಕ್ತಿಗೆ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ದೇವೇಂದ್ರ ಸಿನ್ಹಾ ಅಲಿಯಾಸ್ ಸೋನು ಎಂಬವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ದೇವೇಂದ್ರ ಸಿನ್ಹಾ ಕೋಮೇಶ್ ಸಾಹುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ದೇವೇಂದ್ರ ಸಿನ್ಹಾ, ಯುವತಿಯ ಸೋಗಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮೇಶ್ ಸಾಹುವೊಂದಿಗೆ ಗೆಳೆತನ ಮಾಡಿದ್ದ. ತನ್ನನ್ನು ತಾನು ಮಾನಸಿ ಎಂದು ಹೇಳಿಕೊಂಡಿದ್ದ ದೇವೇಂದ್ರ, ಕಳೆದ ಎಂಟು ತಿಂಗಳುಗಳಿಂದ ಯುವತಿಯ ಸೋಗಿನಲ್ಲಿ ಸಂದೇಶ ರವಾನಿಸುತ್ತಿದ್ದ. ಅಲ್ಲದೇ ದೇವೇಂದ್ರ ಮತ್ತು ಕೋಮೇಶ್ ಸಾಹು ವಾಟ್ಸ್ಆ್ಯಪ್ನಲ್ಲಿ ಪರಸ್ಪರ ಸಂದೇಶ ರವಾನಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ, ಕಳೆದ ಮೇ.3 ರಂದು ದೇವೇಂದ್ರ ಕೋಮೇಶ್ಗೆ ಕರೆ ಮಾಡಿ ಮೇಧಾ ಗ್ರಾಮಕ್ಕೆ ಬರುವಂತೆ ಹೇಳಿದ್ದ. ಇಲ್ಲಿ ಕೋಮೇಶ್ ಮಾನಸಿಗಾಗಿ ಕಾದು ಕುಳಿತಿದ್ದ.
ಈ ವೇಳೆ ಕೋಮೇಶ್ ದೇವೇಂದ್ರನ ಮೊಬೈಲ್ ನೋಡಿದ್ದಾನೆ. ಇದರಲ್ಲಿ ಮಾನಸಿ ಎಂಬ ಹೆಸರಿನ ವಾಟ್ಸ್ಆ್ಯಪ್ ಚಾಟ್ ಇರುವುದನ್ನು ಕಂಡು ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಕೋಮೇಶ್ ಮತ್ತು ದೇವೇಂದ್ರ ನಡುವೆ ಈ ವಿಚಾರವಾಗಿ ವಾಗ್ವಾದ ನಡೆದಿದೆ. ಈ ಸಂಬಂಧ ಕೋಮೇಶ್ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ದೇವೇಂದ್ರನನ್ನು ಬೆದರಿಸಿದ್ದಾನೆ. ಹಾಗಾಗಿ ದೇವೇಂದ್ರ ಕೋಮೇಶ್ಗೆ ಹಣ ಕೊಡುವುದಾಗಿ ಹೇಳಿದ್ದ. ಬಳಿಕ ಇಬ್ಬರು ತಮ್ಮ ತಮ್ಮ ಮನೆಗೆ ತೆರಳಿದ್ದು, ಮತ್ತೆ ಇಬ್ಬರೂ ಸಂಜೆ ಭೇಟಿ ಮಾಡಿದ್ದಾರೆ. ಈ ವೇಳೆ, ದೇವೇಂದ್ರ ಕೋಮೇಶ್ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಕೋಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಲಖನ್ ಪಟ್ಲೆ, ಯುವತಿಯ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿ ಕೊಲೆ ಮಾಡಲಾಗಿದೆ. ಮೋಸ ಹೋದ ವ್ಯಕ್ತಿಯನ್ನೇ ಆರೋಪಿಯು ಚೂರಿನಿಂದ ಇರಿದು ಕೊಂದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.ಬಂಧಿತ ಆರೋಪಿಯಿಂದ ಒಂದು ಲಕ್ಷ ನಗದು ಮತ್ತು ಕೃತ್ಯಕ್ಕೆ ಬಳಸಿದ ಚಾಕು ಮತ್ತು ಮೊಬೈಲ್ ಫೋನ್ನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಪೋಷಕರೇ ಎಚ್ಚರ! ಪ್ಲೇ ಝೋನ್ನಲ್ಲಿ ಆಟವಾಡಲು ಹೋಗಿ 4 ಬೆರಳು ಕಳ್ಕೊಂಡ 3 ವರ್ಷದ ಮಗು