ರಾಯ್ಪುರ್ (ಛತ್ತೀಸ್ಗಢ): ಕೊರೊನಾ ಸೋಂಕು ತಗುಲಿ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಛತ್ತೀಸ್ಗಢ ಸರ್ಕಾರ ಘೋಷಿಸಿದೆ. ಅಲ್ಲದೇ 'ಛತ್ತೀಸ್ಗಢ ಮಾಧ್ಯಮ ಪ್ರತಿನಿಧಿ ಕಲ್ಯಾಣ ನೆರವು' ನಿಯಮಗಳ ಅಡಿಯಲ್ಲಿ ಕೋವಿಡ್ನಿಂದ ದಾಖಲಾದ ಪತ್ರಕರ್ತರ ಆಸ್ಪತ್ರೆಯ ವೆಚ್ಚವನ್ನೂ ಭರಿಸುವುದಾಗಿ ಸರ್ಕಾರ ತಿಳಿಸಿದೆ.
ಛತ್ತೀಸ್ಗಢದಲ್ಲಿ ಕೊರೊನಾದಿಂದಾಗಿ ಒಟ್ಟು 30 ಮಾಧ್ಯಮ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಮೃತ ಪತ್ರಕರ್ತರ ಕುಟುಂಬಗಳಿಗೆ ಆಯಾ ಜಿಲ್ಲೆಗಳಲ್ಲಿನ ಸಾರ್ವಜನಿಕ ಸಂಪರ್ಕ ಕಚೇರಿಗಳಿಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಇದನ್ನೂ ಓದಿ: ಕೋವಿಡ್ನಿಂದ 67 ಪತ್ರಕರ್ತರ ಸಾವು: ಆರ್ಥಿಕ ನೆರವು ನೀಡಲು ಕೇಂದ್ರ ಒಪ್ಪಿಗೆ
ಕೊರೊನಾ ಸಾಂಕ್ರಾಮಿಕದ ಆರಂಭದಿಂದಲೂ ಕೋವಿಡ್, ಲಾಕ್ಡೌನ್ ಕುರಿತ ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವ, ಜಾಗೃತಿ ಮೂಡಿಸುವ ಕಾರ್ಯವನ್ನು ಪತ್ರಕರ್ತರೂ ಮಾಡುತ್ತಾ ಬಂದಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಒಡಿಶಾ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳು ಪತ್ರಕರ್ತರನ್ನು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಕಾರ್ಮಿಕರು ಎಂದು ಘೋಷಿಸಿವೆ.
ಕೋವಿಡ್ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಈಗಾಗಲೇ ಉತ್ತರ ಪ್ರದೇಶ ಸರ್ಕಾರವು 10 ಲಕ್ಷ ರೂ. ಹಾಗೂ ಒಡಿಶಾ ರಾಜ್ಯವು 15 ಲಕ್ಷ ರೂ. ಆರ್ಥಿಕ ನೆರವನ್ನು ಘೋಷಿಸಿವೆ.