ಬಿಲಾಸ್‌ಪುರ (ಛತ್ತೀಸ್‌ಗಢ): ತನ್ನ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ತುಂಡು ತುಂಡು ಮಾಡಿ ಅವನ್ನು ತನ್ನ ಮನೆಯ ನೀರಿನ ಟ್ಯಾಂಕ್ನಲ್ಲಿ ಹಾಕಿ ಬಚ್ಚಿಟ್ಟ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಛತ್ತೀಸ್‌ಗಢದ ಬಿಲಾಸ್‌ಪುರದ ಉಸ್ಲಾಪುರ್‌ನಲ್ಲಿ ಈ ಘಟನೆ ನಡೆದಿದೆ. ಇದೀಗ ಮೃತದೇಹ ಪತ್ತೆಯಾಗಿದೆ. ಎರಡು ತಿಂಗಳ ಹಿಂದೆಯೇ ದೇಹದ ಭಾಗಗಳನ್ನು ಟ್ಯಾಂಕ್ನೊಳಕ್ಕೆ ಹಾಕಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪತ್ನಿಯನ್ನು ಕೊಂದ ಆರೋಪಿಯನ್ನು ಪವನ್ ಠಾಕೂರ್ ಎಂದು ಗುರುತಿಸಲಾಗಿದೆ. ಪತ್ನಿ ಸತಿ ಸಾಹು ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಕೊಂದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದೇಶದಲ್ಲಿ ಸಂಚಲನ ಮೂಡಿಸಿದ್ದ, ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಮತ್ತೆ ಈ ಘಟನೆ ನೆನಪಿಸಿದೆ. ಸಕ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಉಸ್ಲಾಪುರ ಪ್ರದೇಶದಲ್ಲಿ ಈ ಅಪರಾಧ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಕ್ರಿ ಪೊಲೀಸರು ಭಾನುವಾರ ತಡರಾತ್ರಿ ಉಸ್ಲಾಪುರದ ಮನೆಯೊಂದರ ನೀರಿನ ಟ್ಯಾಂಕ್ನಿಂದ ಮಹಿಳೆಯ ಕೊಳೆತ ಶವವನ್ನು ಹೊರತೆಗೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೊಲೆ ನಡೆದ ಮನೆಯ ನೆರೆಹೊರೆಯವರು ಆ ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಸಕ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡು ಕೊಳೆತ ದೇಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯಗಳ ತಜ್ಞರು ಅಪರಾಧ ನಡೆದ ಸ್ಥಳದಲ್ಲಿ ತನಿಖೆ ಕೈಗೊಂಡಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿ ಠಾಕೂರ್‌ನನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿಯಲ್ಲಿ ನಡೆದಿತ್ತು ಭೀಕರ ಕೊಲೆ: ದೆಹಲಿಯಲ್ಲಿ ನಡೆದ ನಿಕ್ಕಿ ಯಾದವ್ ಹತ್ಯೆ ಪ್ರಕರಣದ ಬೆನ್ನಲ್ಲೇ ಈ ಘಟನೆ ನಡೆದಿದೆ. ನಿಕ್ಕಿ ಯಾದವ್ ಪ್ರಕರಣದಲ್ಲಿ ಆರೋಪಿ ಸಾಹಿಲ್ ಗೆಹ್ಲೋಟ್ ತನ್ನ ಗೆಳತಿ ಮತ್ತು ಲಿವ್-ಇನ್ ಪಾರ್ಟನರ್ ನಿಕ್ಕಿ ಯಾದವ್ ಅವರನ್ನು ಕೊಂದು, ಆಕೆಯ ಶವವನ್ನು ತನ್ನ ಕುಟುಂಬದ ಒಡೆತನದ ಧಾಬಾದಲ್ಲಿನ ರೆಫ್ರಿಜರೇಟರ್‌ನಲ್ಲಿ ಬಚ್ಚಿಟ್ಟು, ಅದೇ ದಿನ ಬೇರೆ ಹುಡುಗಿಯೊಂದಿಗೆ ಮದುವೆಯಾಗಿದ್ದ. ವರದಿಗಳ ಪ್ರಕಾರ, ಸಾಹಿಲ್ ಗೆಹ್ಲೋಟ್ ಈತ ನಿಕ್ಕಿ ಯಾದವ್ ಜೊತೆ ಪ್ರೇಮ ಸಂಬಂಧ ಹೊಂದಿದ್ದ. ಆದರೆ ಆತನ ಕುಟುಂಬದವರು ಬೇರೊಂದು ಹುಡುಗಿಯೊಂದಿಗೆ ಈತನ ಮದುವೆಯನ್ನು ನಿಗದಿಪಡಿಸಿದ್ದರು.
ಇದನ್ನು ತಿಳಿದ ನಿಕ್ಕಿ ಯಾದವ್, ಆತ ಬೇರೊಬ್ಬಳೊಂದಿಗೆ ಮದುವೆಯಾಗುವುದನ್ನು ಪ್ರಶ್ನಿಸಿದ್ದಳು. ಇದೇ ವಿಚಾರವಾಗಿ ಫೆಬ್ರವರಿ 10 ರಂದು ದೆಹಲಿಯ ಕಾಶ್ಮೀರಿ ಗೇಟ್ ಬಳಿ ಇಬ್ಬರ ಮಧ್ಯೆ ಜಗಳವಾಗಿತ್ತು. ನಂತರ ಸಾಹಿಲ್ ಗೆಹ್ಲೋಟ್ ತನ್ನ ಗೆಳತಿ ನಿಕ್ಕಿಯನ್ನು ಕಾರಿನೊಳಗೆ ಮೊಬೈಲ್ ಫೋನ್ ಕೇಬಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿದೆ. ನಿಕ್ಕಿಯ ಮೃತದೇಹವನ್ನು ತನ್ನ ಕಾರಿನಲ್ಲಿಟ್ಟುಕೊಂಡು ಗೆಹ್ಲೋಟ್ ಮಜ್ನು ಕಾ ತಿಲಾ ಬೈಪಾಸ್, ಮಧುಬನ್ ಚೌಕ್, ಪಶ್ಚಿಮ ವಿಹಾರ್, ಜನಕ್‌ಪುರಿ ಮತ್ತು ಉತ್ತಮ್ ನಗರಗಳ ಮೂಲಕ ಹಾಯ್ದು ಮಿತ್ರೌನ್ ಗ್ರಾಮಕ್ಕೆ ಹೋಗಿ ಅಲ್ಲಿ ರೆಫ್ರಿಜರೇಟರ್‌ನಲ್ಲಿ ಶವ ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಶ್ರದ್ಧಾ ವಾಲ್ಕರ್ ನೆನಪಿಸುವ ಕೊಲೆ: ಕತ್ತರಿಸಿದ ಮೃತದೇಹ ಪ್ಲಾಸ್ಟಿಕ್ ಚೀಲದಲ್ಲಿತ್ತು!