ವಾರಣಾಸಿ: ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಚೇತೇಶ್ವರ ಪೂಜಾರ ಶನಿವಾರ ಕುಟುಂಬ ಸಮೇತರಾಗಿ ಕಾಶಿ ವಿಶ್ವನಾಥ ಧಾಮಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇದರ ನಂತರ ಐಎಂಎಸ್ ಬಿಎಚ್‌ಯು ನರವಿಜ್ಞಾನ ವಿಭಾಗಕ್ಕೆ ತೆರಳಿ ಪ್ರೊ.ವಿಜಯನಾಥ್ ಮಿಶ್ರಾ ಜೊತೆಗೂಡಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ರೋಗಿಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಪೂಜಾರ ಆಗಮನದ ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಯಲ್ಲಿ ಅವರನ್ನು ವೀಕ್ಷಿಸಲು ಜನಸಾಗರವೇ ನೆರೆದಿತ್ತು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ತಂಗಿದ್ದ ಪೂಜಾರ ಬಳಿಕ ಚಿತ್ರಕೂಟಕ್ಕೆ ಹೊರಟರು ಎಂದು ಬಿಎಚ್‌ಯು ನರವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ವಿಜಯನಾಥ್ ಮಿಶ್ರಾ ತಿಳಿಸಿದ್ದಾರೆ.
ಚೇತೇಶ್ವರ್ ಪೂಜಾರ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿ. ಇತ್ತೀಚೆಗೆ ಅವರು ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಪೂಜಾರ 9 ಪಂದ್ಯಗಳಲ್ಲಿ 111.62 ಸ್ಟ್ರೈಕ್ ರೇಟ್‌ನಲ್ಲಿ 624 ರನ್ ಗಳಿಸಿದ್ದರು.
ವಿಶೇಷ ಎಂದರೆ, 2014 ರ ಬಳಿಕ ಐಪಿಎಲ್ನಲ್ಲಿ ಅವಕಾಶ ವಂಚಿತರಾದ ಚೇತೇಶ್ವರ ಪೂಜಾರ ಅವರನ್ನು ಐಪಿಎಲ್ 2021 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್ಕೆ ತಂಡ ಖರೀದಿಸಿತ್ತು. 50 ಲಕ್ಷ ರೂ.ಗೆ ತಂಡದ ಪಾಲಾಗಿದ್ದ ಪೂಜಾರ ಆಯ್ಕೆ ಎಲ್ಲರಿಗೂ ಅಚ್ಚರಿಯಾಗಿತ್ತು.
ಬಲಗೈ ಬ್ಯಾಟರ್ ಚೇತೇಶ್ವರ ಪೂಜಾರ ಡಿಸೆಂಬರ್ 2005 ರಲ್ಲಿ ಸೌರಾಷ್ಟ್ರ ಪರ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದಾರೆ. ಅಕ್ಟೋಬರ್ 2010 ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಪೂಜಾರ ತಮ್ಮ ತಂತ್ರಗಾರಿಕೆ ಮತ್ತು ಸುದೀರ್ಘ ಇನ್ನಿಂಗ್ಸ್‌ಗೆ ಹೆಸರುವಾಸಿ.
ಇದನ್ನೂ ಓದಿ: 'IPLನಲ್ಲಿ ಸೇಲ್ ಆಗಿದ್ರೆ ಕೇವಲ ಬೆಂಚ್ ಕಾಯುತ್ತಿದೆ'.. ಎಡವಿದ ಬಳಿಕ ಬುದ್ಧಿ ಬಂತು ಎಂದ ಪೂಜಾರ!