ಚೆನ್ನೈ: ತಮಿಳುನಾಡಿನ ಪುರಸಾವಲ್ಕಂ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ, 48 ವರ್ಷದ ಮಹಿಳೆಯೊಬ್ಬರು ಬೀಗ ಹಾಕಿದ ಮನೆಯಲ್ಲಿ ಪತಿಯ ಮೃತದೇಹದೊಂದಿಗೆ ಎರಡು ದಿನಗಳ ಕಾಲ ವಾಸವಿದ್ದರು. ಪುರಸಾವಲ್ಕಂನ ವೈಕೋಕರನ್ ಸ್ಟ್ರೀಟ್ ನಿವಾಸಿಯಾದ ಅಶೋಕ್ ಬಾಬು (53) ಮೃತ ವ್ಯಕ್ತಿಯಾಗಿದ್ದು, ಆತನ ಪತ್ನಿ ಪದ್ಮಿನಿ (48) ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಈ ದಂಪತಿಗೆ ಮಗಳು ಮತ್ತು ಮಗ ಇದ್ದಾರೆ.
ಮಗ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯಾದ ಬಳಿಕ ಮಗಳು ಗಂಡನ ಮನೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಈ ಮಧ್ಯೆ, ಮಗಳು ಆರತಿ ಕಳೆದ ಎರಡು ದಿನಗಳಿಂದ ತಂದೆಗೆ ದೂರವಾಣಿ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆರತಿ ತಮಿಳುನಾಡಿನ ವೆಪೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ನೋಡಿದಾಗ ಅಲ್ಲಿ, ಅಶೋಕ್ ಬಾಬು ಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಪತಿಯ ಶವದ ಬಳಿ ಪತ್ನಿ ಕುಳಿತಿರುವುದು ಕಂಡುಬಂದಿದೆ.
ಇದನ್ನೂ ಓದಿ: ವಿಡಿಯೋ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ.. ಕಂಬಕ್ಕೆ ಕಟ್ಟಿ ಯುವಕನಿಗೆ ಥಳಿಸಿದ ಗ್ರಾಮಸ್ಥರು
ವೆಪೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪದ್ಮಿನಿ ಅವರನ್ನು ಚಿಕಿತ್ಸೆಗಾಗಿ ಮಾನಸಿಕ ಆರೋಗ್ಯ ಆಸ್ಪತ್ರೆಗೆ ಕಳುಹಿಸಿದ್ದಾರೆ.