ಚೆನ್ನೈ: ತಮಿಳುನಾಡಿನಲ್ಲಿ ಮಳೆಯಿಂದಾಗಿ ಮತ್ತೆ ಮೂರು ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಇದುವರೆಗೆ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 26ಕ್ಕೆ ತಲುಪಿದೆ ಎಂದು ರಾಜ್ಯ ಸರ್ಕಾರ ಶನಿವಾರ ತಿಳಿಸಿದೆ. ರಾಜ್ಯದ ರಾಜಧಾನಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ತಿರುವಳ್ಳೂರು ಜಿಲ್ಲೆಯಲ್ಲಿ ಮಳೆಯಿಂದ ಒಬ್ಬರು ಸಾವನ್ನಪ್ಪಿರುವುದು ವರದಿಯಾಗಿದೆ. ಅ. 29ರಂದು ಈಶಾನ್ಯ ಮಾನ್ಸೂನ್ ಆರಂಭಗೊಂಡಿದ್ದು, ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ 10.04 ಮಿಮೀ ಮಳೆಯಾಗಿದೆ.
ನಾಗಪಟ್ಟಣಂ ಜಿಲ್ಲೆಯ ಕೊಡಿಯಕರೈ ನಿಲ್ದಾಣದಲ್ಲಿ ಗರಿಷ್ಠ 9 ಸೆಂ.ಮೀ ಮಳೆಯಾಗಿದ್ದು, ರಾಮೇಶ್ವರಂ (ರಾಮನಾಥಪುರಂ) 8, ಕೊಟ್ಟಾರಂ (ಕನ್ಯಾಕುಮಾರಿ) ಮತ್ತು ಕುಲಶೇಖರಪಟ್ಟಿಣಂ (ತೂತುಕುಡಿ)ಯಲ್ಲಿ ಕ್ರಮವಾಗಿ 7 ಸೆಂ.ಮೀ ಮಳೆಯಾಗಿದೆ.
ಶುಕ್ರವಾರದ ಮಳೆಗೆ ಸುಮಾರು 25 ಜಾನುವಾರುಗಳು ನಷ್ಟವಾಗಿದ್ದು, 140 ಗುಡಿಸಲುಗಳಿಗೆ ಹಾನಿಯಾಗಿದೆ ಎಂದು ಸರ್ಕಾರ ತಿಳಿಸಿದೆ. ನವೆಂಬರ್ 4ರಂದು ಚೆನ್ನೈನಲ್ಲಿ ಸುರಿದ ಮಳೆಗೆ ಧರೆಗುರುಳಿದ್ದ ಸುಮಾರು 64 ಮರಗಳನ್ನು ತೆರವುಗೊಳಿಸಲಾಗಿದೆ.
ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಸಚಿವರಾದ ಕೆ ಎನ್ ನೆಹರು ಮತ್ತು ಪಿ ಕೆ ಶೇಖರ್ ಬಾಬು ಅವರು ಮೃತರ ಕುಟುಂಬಗಳನ್ನು ಖುದ್ದು ಭೇಟಿ ಮಾಡಿ ಸಾಂತ್ವನ ಹೇಳಿ ಘೋಷಿಸಿದಂತೆ ಪರಿಹಾರ ಮೊತ್ತವನ್ನು ನೀಡಿದರು.
ಲೋಕೋಪಯೋಗಿ ಇಲಾಖೆಯ ಪ್ರಕಾರ ತಮಿಳುನಾಡಿನಾದ್ಯಂತ 14,138 ಜಲಮೂಲಗಳ ಪೈಕಿ ಸುಮಾರು 2,480 ಟ್ಯಾಂಕ್‌ಗಳು ನೀರಿನಿಂದ ತುಂಬಿದ್ದು, 2,065 ಟ್ಯಾಂಕ್‌ಗಳಲ್ಲಿ 75 ಪ್ರತಿಶತ ನೀರು ಮತ್ತು 2,799 ಟ್ಯಾಂಕ್‌ಗಳಲ್ಲಿ ಸುಮಾರು 51 ಪ್ರತಿಶತದಷ್ಟು ನೀರು ತುಂಬಿವೆ.
ಇದನ್ನೂ ಓದಿ: ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು.. ರಾಜ್ಯದಲ್ಲಿ ಇನ್ನೂ ಐದು ದಿನ ಯೆಲ್ಲೋ ಅಲರ್ಟ್