ಸೂರತ್: ಸಚಿನ್ ಜಿಐಡಿಸಿಯಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್ ಸೋರಿಕೆಯಾಗಿದ್ದು, ಗ್ಯಾಸ್ ಲಿಕೇಜ್ನಿಂದ ಉಸಿರುಕಟ್ಟಿ ಆರು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ 20 ಮಂದಿ ವಿಷಾನಿಲದಿಂದಾಗಿ ಅಸ್ವಸ್ಥಗೊಂಡಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಐಡಿಸಿಯ ರಾಜಕಮಲ್ ಚಿಕ್ಕಡಿ ಪ್ಲಾಟ್ ನಂ.362ರ ಹೊರಗೆ ನಿಂತಿದ್ದ ಕೆಮಿಕಲ್ ಟ್ಯಾಂಕರ್‌ನಿಂದ 8-10 ಮೀಟರ್ ದೂರದಲ್ಲಿ ಎಲ್ಲ ಕಾರ್ಮಿಕರು ಮಲಗಿದ್ದರು. ಏಕಾಏಕಿ ಟ್ಯಾಂಕರ್‌ನ ಡ್ರೈನೇಜ್ ಪೈಪ್ನಿಂದ ಗ್ಯಾಸ್ ಸೋರಿಕೆಯಾಗಿದೆ. ಇದರಿಂದಾಗಿ ಮಲಗಿದ್ದ ಕಾರ್ಮಿಕರು ಮತ್ತು ಮಿಲ್ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿದರು.
ರಾಸಾಯನಿಕ ತುಂಬಿದ ಟ್ಯಾಂಕರ್, ಮಿಲ್‌ನ ಹೊರಗೆ ಟ್ಯಾಂಕರ್‌ನ ಪೈಪ್ ಸೋರಿಕೆಯಾದ ತಕ್ಷಣ ಗ್ಯಾಸ್‌ನಿಂದಾಗಿ ಇಡೀ ಮಿಲ್‌ನಲ್ಲಿದ್ದ ಎಲ್ಲರನ್ನೂ ಉಸಿರುಗಟ್ಟಿಸಿದ್ದು, ಮಿಲ್‌ನ ಕಾರ್ಮಿಕರು ನೆಲಕ್ಕೆ ಕುಸಿದು ಬಿದ್ದಿದ್ದಾರೆ ಎಂದು ವಿಶ್ವ ಪ್ರೇಮ್ ಮಿಲ್ಸ್ ಪ್ರೊಡಕ್ಷನ್ ಮ್ಯಾನೇಜರ್ ಹೇಳಿದ್ದಾರೆ.
ಈ ಬಗ್ಗೆ ವೈದ್ಯರು ಮಾತನಾಡಿ, ಬೆಳಗ್ಗೆ 5 ಗಂಟೆ ಸುಮಾರಿಗೆ ಗ್ಯಾಸ್ ಸೋರಿಕೆ ವಿಚಾರವಾಗಿ ಕರೆ ಬಂದಿದ್ದು, ಕೂಡಲೇ ಸಕಲ ಸಿದ್ಧತೆಯೊಂದಿಗೆ ಸಿದ್ಧರಾಗುವಂತೆ ಸೂಚಿಸಲಾಗಿತ್ತು. ಅದರಂತೆ ನಾವು ಎಲ್ಲಾ ಸೌಲಭ್ಯಗಳ ಜೊತೆ ತಯಾರಿದ್ದೀವಿ. ಇದಾದ ಬಳಿಕ 20 ಮಂದಿ ಕಾರ್ಮಿಕರನ್ನು ಆ್ಯಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕರೆತರಲಾಯಿತು. ಅದರಲ್ಲಿ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇತರ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಕೆಲ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಈ ವೇಳೆ, ವಿಶ್ವ ಪ್ರೇಮ್ ಮಿಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿರುವ ಯುವಕ ಮಾತನಾಡಿ, ರಾಸಾಯನಿಕ ಟ್ಯಾಂಕರ್‌ನಿಂದ ಗ್ಯಾಸ್ ಲೀಕ್ ಆಗುತ್ತಿತ್ತು. ಬಳಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಆದರೆ ಟ್ಯಾಂಕರ್ ಬಳಿ ನಮ್ಮ ಜನ ಸೇರಿ 20 ಜನ ನೆಲಕ್ಕೆ ಕುಸಿದು ಬಿದ್ದಿದ್ದರು.