ಲಖನೌ(ಉತ್ತರ ಪ್ರದೇಶ) : ಅತ್ಯಾಚಾರ ಸಂತ್ರಸ್ತೆ ಹಾಗೂ ಸಾಕ್ಷಿಯಾಗಿದ್ದ ಮಹಿಳೆಯರಿಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಬಿಎಸ್‌ಪಿ ಸಂಸದ ಅತುಲ್ ರೈ ವಿರುದ್ಧ ಸೋಮವಾರ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಜನವರಿ ಮೂರಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಅತುಲ್ ಕುಮಾರ್ ಸಿಂಗ್ ಅಲಿಯಾಸ್ ಅತುಲ್ ರೈ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ನೈನಿ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಂಗ ಬಂಧನದ ವಿಚಾರಣೆ ನಡೆಸಲಾಗಿದೆ.
ಅತುಲ್ ರೈ ವಿರುದ್ಧ ವಿವಿಧ ಸೆಕ್ಷನ್ಗಳಡಿ ಎಸಿಪಿ ಶ್ವೇತಾ ಶ್ರೀವಸ್ತ ಚಾರ್ಜ್ ಶೀಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ರವಿಕುಮಾರ್ ಗುಪ್ತಾ ಅವರು ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಿದ್ದಾರೆ.
ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯವರಾದ ಇಬ್ಬರು ಮಹಿಳೆಯರು ಬಿಎಸ್‌ಪಿ ಸಂಸದ ಅತುಲ್ ರೈ ವಿರುದ್ಧ ಅತ್ಯಾಚಾರ ಆರೋಪ ಮಾಡಿ, ಆಗಸ್ಟ್ 16ರಂದು ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿ ಬೆಂಕಿ ಹಚ್ಚಿಕೊಂಡಿದ್ದರು. ಈ ವಿಡಿಯೋದಲ್ಲಿ ಐಪಿಎಸ್ ಅಧಿಕಾರಿಗಳು ತನಿಖೆ ನಡೆಸುತ್ತಿಲ್ಲ ಎಂದೂ ಆರೋಪಿಸಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆ ದಾಖಲು ಮಾಡಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರೂ ಸಾವನ್ನಪ್ಪಿದ್ದರು. ಇದೇ ವಿಚಾರದಲ್ಲಿ ಆಗಸ್ಟ್ 27ರಂದು ದೂರು ದಾಖಲಾಗಿದ್ದು, ಸಂಸದ ಅತುಲ್ ರೈನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಆಟೋ ಮೇಲೆ ಉರುಳಿಬಿದ್ದ ಲಾರಿಗಳು.. ಅಪ್ಪ-ಅಮ್ಮನೊಂದಿಗೆ ಮಗು ಸ್ಥಳದಲ್ಲೇ ಸಾವು!