ಅಮರಾವತಿ (ಆಂಧ್ರಪ್ರದೇಶ): ಕೌಶಲ್ಯಾಭಿವೃದ್ಧಿ ಹಗರಣ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಎಸಿಬಿ ನ್ಯಾಯಾಲಯದ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಮೂರು ಪುಟಗಳ ಈ ಪತ್ರದಲ್ಲಿ ಹಲವು ಗಂಭೀರ ವಿಚಾರಗಳನ್ನು ಉಲ್ಲೇಖಿಸಿದ್ದು, ಎಡಪಂಥೀಯ ಉಗ್ರಗಾಮಿಗಳು ತಮ್ಮ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ನಾಯ್ಡು ಆರೋಪಿಸಿದ್ದಾರೆ.
ಸೆಪ್ಟೆಂಬರ್ 9ರಂದು ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಸದ್ಯ ರಾಜಮಹೇಂದ್ರವರಂನ ಸೆಂಟ್ರಲ್ ಜೈಲಿನಲ್ಲಿ ಅವರು ಇದ್ದಾರೆ. ತಮ್ಮ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಕ್ಟೋಬರ್ 25ರಂದು ಎಸಿಬಿ ನ್ಯಾಯಾಲಯದ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಜೈಲಿನ ಅಧಿಕಾರಿಗಳು ನ್ಯಾಯಾಧೀಶರಿಗೆ ರವಾನಿಸಿದ್ದಾರೆ.
ನಾಯ್ಡು ಪತ್ರದ ಪ್ರಮುಖ ಅಂಶಗಳು...
- ಇತ್ತೀಚೆಗೆ ರಾಜಮಹೇಂದ್ರವರಂನ ಸೆಂಟ್ರಲ್ ಜೈಲು ಮತ್ತು ಅದರ ಸುತ್ತಮುತ್ತ ನಡೆದ ಕೆಲವು ಅಹಿತಕರ ಘಟನೆಗಳನ್ನು ನಿಮ್ಮ ಪರಿಗಣನೆಗೆ ತರಲು ಬಯಸುತ್ತೇನೆ. ಝೆಡ್ + ಶ್ರೇಣಿಯ ಭದ್ರತಾ ಹೊಂದಿದ್ದರೂ ಸಹ ನನ್ನ ಜೀವ ಮತ್ತು ದೇಹ ಭಾಗಕ್ಕೆ ಅಪಾಯ ಉಂಟಾಗಿದೆ.
- ನನ್ನನ್ನು ಸೆಪ್ಟೆಂಬರ್ 10ರಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಸೆ.10-11ರ ಮಧ್ಯರಾತ್ರಿ ರಾಜಮಹೇಂದ್ರವರಂನ ಕೇಂದ್ರ ಕಾರಾಗೃಹಕ್ಕೆ ನನ್ನನ್ನು ಕರೆತರಲಾಯಿತು. ಕಾರಾಗೃಹಕ್ಕೆ ಪ್ರವೇಶಿಸುವಾಗ ಮತ್ತು ಜೈಲು ಸಂಕೀರ್ಣದಲ್ಲಿದ್ದಾಗ ನನ್ನನ್ನು ಅನಧಿಕೃತವಾಗಿ ಚಿತ್ರೀಕರಣ ಮಾಡಲಾಗಿದೆ. ನನ್ನ ಛಾಯಾಚಿತ್ರ ತೆಗೆಯಲಾಗಿದೆ. ಈ ದೃಶ್ಯಾವಳಿಯನ್ನು ಪೊಲೀಸರೇ ಬಿಡುಗಡೆ ಮಾಡಿದ್ದಾರೆ. ಜನರ ದೃಷ್ಟಿಯಲ್ಲಿ ನನ್ನ ಪ್ರತಿಷ್ಠೆ ಮತ್ತು ಘನತೆಗೆ ಹಾನಿ ಮಾಡುವ ದುರುದ್ದೇಶಪೂರಿತ ಉದ್ದೇಶ, ನನ್ನ ಸುರಕ್ಷತೆಯ ಕಾಳಜಿಯನ್ನು ಗಾಳಿಗೆ ತೂರುವ ಮೂಲಕ ನನ್ನ ಪ್ರಾಣವನ್ನು ಅಪಾಯಕ್ಕೆ ತಳ್ಳುವ ಪ್ರವೃತ್ತಿಯನ್ನು ಹೊಂದಿರುವ ಅಧಿಕಾರದಲ್ಲಿರುವ ಪಕ್ಷವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆ ಚಿತ್ರಗಳನ್ನು ವ್ಯಾಪಕವಾಗಿ ಪ್ರಸಾರ ಹಾಗೂ ಪ್ರಚಾರ ಮಾಡಿದೆ.
- ಪೂರ್ವ ಗೋದಾವರಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಮತ್ತು ಜೈಲು ಅಧಿಕಾರಿಗಳು ಒಂದು ಅನಾಮಧೇಯ ಪತ್ರವನ್ನು ಸ್ವೀಕರಿಸಿರುವುದು ನನ್ನ ಗಮನಕ್ಕೆ ಬಂದಿದೆ. ಅದರಲ್ಲಿ ಕೆಲವು ಎಡಪಂಥೀಯ ಉಗ್ರಗಾಮಿಗಳು ನನ್ನನ್ನು ಹತ್ಯೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಬರೆಯಲಾಗಿದೆ. ಆ ಹತ್ಯೆಯ ಯತ್ನವನ್ನು ಕಾರ್ಯಗತಗೊಳಿಸಲು ಕೋಟ್ಯಂತರ ರೂಪಾಯಿಗಳನ್ನು ಬದಲಾವಣೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು ಈ ಪತ್ರದ ಸತ್ಯಾಸತ್ಯತೆಯನ್ನು ತಿಳಿಯಲು ಇದುವರೆಗೆ ಯಾವುದೇ ಪ್ರಯತ್ನ ಮಾಡಿಲ್ಲ. ಯಾವುದೇ ಅನಿರೀಕ್ಷಿತ ಘಟನೆಯನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಂಡಿಲ್ಲ.
- ಎನ್‌ಡಿಪಿಎಸ್ ಪ್ರಕರಣದಲ್ಲಿ ಬಂಧಿತನಾಧ ಎಸ್.ಕೋಟಾದ ಓರ್ವ ಕೈದಿ ಪೆನ್ ಕ್ಯಾಮರಾದೊಂದಿಗೆ ಜೈಲಿನಲ್ಲಿ ಸುತ್ತಾಡುತ್ತಾ, ಒಳಗಿರುವ ಇತರ ಕೈದಿಗಳ ಚಿತ್ರಗಳನ್ನು ಸೆರೆಹಿಡಿಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
- ಇವುಗಳು ಸಹ ನನ್ನ ಗಮನಕ್ಕೆ ಬಂದಿದೆ: (ಎ) ಅಧಿಕಾರದಲ್ಲಿರುವ ಜನರ ನಿರ್ದೇಶನದ ಮೇರೆಗೆ ನನ್ನ ಚಲನವಲನಗಳನ್ನು ಕೆಟ್ಟ ರೀತಿಯಲ್ಲಿ ಸೆರೆಹಿಡಿಯಲು ಕೆಲವು ಅಪರಿಚಿತ ದುಷ್ಕರ್ಮಿಗಳು ರಾಜಮಹೇಂದ್ರವರಂನ ಕೇಂದ್ರ ಕಾರಾಗೃಹದ ಮೇಲೆ ಡ್ರೋನ್ ಹಾರಿಸಿದ್ದಾರೆ. ಕೆಲವು ಕೈದಿಗಳನ್ನು ಇರಿಸಲಾಗಿರುವ ತೆರೆದ ಜೈಲಿನ ಬಳಿ ಡ್ರೋನ್ ಬಂದಿತ್ತು. ಈ ಆತಂಕಕಾರಿ ಘಟನೆಯ ಹೊರತಾಗಿಯೂ, ಸ್ಥಳೀಯ ಪೊಲೀಸರು ಇದುವರೆಗೆ ಸತ್ಯವನ್ನು ಹೊರಹಾಕಲು ಅಥವಾ ಈ ಘಟನೆಯ ಹಿಂದಿನ ಮಾಸ್ಟರ್‌ಮೈಂಡ್ ಅನ್ನು ಪತ್ತೆಹಚ್ಚಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆಯು ಜೈಲು ಅಧಿಕಾರಿಗಳು ಅಸಹಾಯಕರಾಗಿದ್ದಾರೆ ಎಂಬ ನಗ್ನಸತ್ಯವನ್ನು ಬಯಲು ಮಾಡುತ್ತದೆ. (ಬಿ) ಕೆಲವು ದುಷ್ಕರ್ಮಿಗಳು ಗಾಂಜಾ ಪೊಟ್ಟಣಗಳನ್ನು ಜೈಲಿಗೆ ಎಸೆದಿದ್ದಾರೆ. ಈ ವೇಳೆ, ತೋಟಗಾರಿಕೆಯಲ್ಲಿದ್ದ ಕೆಲವು ಕೈದಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ದುಷ್ಕರ್ಮಿಗಳು ಸಿಕ್ಕಿಬಿದ್ದರು. ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಒಟ್ಟು 2,200 ಕೈದಿಗಳ ಪೈಕಿ 750 ಮಂದಿಯನ್ನು ಎನ್‌ಡಿಪಿಎಸ್ ಆರೋಪದಲ್ಲಿ ಇರಿಸಲಾಗಿದೆ. ಇದು ನನ್ನ ಭದ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತಿದೆ. (ಸಿ) ನನ್ನ ಕುಟುಂಬದ ಸದಸ್ಯರು ನನ್ನನ್ನು ಭೇಟಿಯಾಗಿ ಹೊರಗೆ ಬರುತ್ತಿರುವಾಗ ಅವರ ಚಿತ್ರಗಳನ್ನು ಸೆರೆಹಿಡಿಯಲು ಅಕ್ಟೋಬರ್ 6ರಂದು ಮತ್ತೊಂದು ಡ್ರೋನ್ ಅನ್ನು ಕೇಂದ್ರ ಕಾರಾಗೃಹದ ಮುಖ್ಯ ದ್ವಾರದ ಮೇಲೆ ಹಾರಿಸಲಾಗಿದೆ. ಈ ಘಟನೆಯು ನನಗೆ ಮಾತ್ರವಲ್ಲದೇ ನನ್ನ ಕುಟುಂಬ ಸದಸ್ಯರಿಗೂ ಅಪಾಯವನ್ನುಂಟುಮಾಡಿದೆ. (ಡಿ) ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹಾಲಿ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಜನವಿರೋಧಿ ಮತ್ತು ಅರಾಜಕ ನೀತಿಗಳನ್ನು ಬಯಲಿಗೆಳೆಯಲು ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿದಾಗ ಆಡಳಿತ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ನಿರ್ದೇಶನ ಮತ್ತು ಪೊಲೀಸರ ಬಹಿರಂಗ ಬೆಂಬಲದೊಂದಿಗೆ ನನ್ನ ಮೇಲೆ ದೈಹಿಕವಾಗಿ ಹಲವಾರು ಬಾರಿ ದಾಳಿ ಮಾಡಲು ಪ್ರಯತ್ನಿಸಿದ್ದರು. ಪ್ರಸ್ತುತ ಸರ್ಕಾರ ಮತ್ತು ಆಡಳಿತ ಪಕ್ಷದ ನಾಯಕರ ಕೃತ್ಯಗಳಿಂದ ನನ್ನ ಜೀವ ಗಂಭೀರವಾದ ಅಪಾಯದಲ್ಲಿದೆ.
ಈ ಮೇಲೆ ತಿಳಿಸಲಾದ ಎಲ್ಲ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ನನಗೆ ಒದಗಿಸಿರುವ ಝೆಡ್ + ಶ್ರೇಣಿ ಭದ್ರತಾ ಕವಚಕ್ಕೆ ಅನುಗುಣವಾಗಿ ರಾಜಮಹೇಂದ್ರವರಂನ ಕೇಂದ್ರ ಕಾರಾಗೃಹ ಮತ್ತು ಅದರ ಸುತ್ತಮುತ್ತ ಫೂಲ್ಪ್ರೂಫ್ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲು ವಿನಂತಿಸಲಾಗಿದೆ ಎಂದು ಚಂದ್ರಬಾಬು ನಾಯ್ಡು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ನ್ಯಾಯಾಂಗ ಬಂಧನ ವಿಸ್ತರಣೆ: ಜೈಲಿನಲ್ಲಿ ಭದ್ರತೆ ಬಗ್ಗೆ ಆತಂಕ