ಆಂಧ್ರಪ್ರದೇಶ: ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಅವರ ಕುಪ್ಪಂ ಕ್ಷೇತ್ರ ಭೇಟಿಗೆ ಪ್ರತಿ ಹಂತದಲ್ಲೂ ಅಡೆತಡೆಗಳನ್ನು ಸೃಷ್ಟಿಸುತ್ತಿರುವ ಪೊಲೀಸರು ಶುಕ್ರವಾರ ಗುಡಿಪಲ್ಲೆ ಮಂಡಲದ ಸ್ಥಳೀಯ ಪಕ್ಷದ ಕಚೇರಿಗೆ ತೆರಳದಂತೆ ತಡೆಹಿಡಿದಿದ್ದಾರೆ. ಇದರಿಂದ ಆಕ್ರೋಶಗೊಂಡ ಚಂದ್ರಬಾಬು ನಾಯ್ಡು ಗುಡಿಪಲ್ಲೆ ಮಂಡಲದ ಕೇಂದ್ರ ಕಚೇರಿಯ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಕುಪ್ಪಂನಲ್ಲಿ ಪ್ರಚಾರ ವೇಳೆ ಚಂದ್ರಬಾಬು ನಾಯ್ಡು ಅವರ ಪ್ರಚಾರ ವಾಹನವನ್ನು ಪೊಲೀಸರು ಜಪ್ತಿ ಮಾಡಿರುವ ಕಾರಣ ಪ್ರತಿಭಟನೆಯ ನಂತರ ನಾಯ್ಡು ಅವರು ಬಸ್ ಮೇಲೆ ಏರಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ವೇಳೆ, ಮಾತನಾಡಿದ ಚಂದ್ರಬಾಬು ನಾಯ್ಡು, ರೋಡ್‌ಶೋಗಳನ್ನು ನಿಷೇಧಿಸುವ ಸರ್ಕಾರಿ ಆದೇಶವನ್ನು ತಂದಿದ್ದಕ್ಕಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಪೊಲೀಸರು ಗುಲಾಮರಂತೆ ಬದುಕುವುದನ್ನು ನಿಲ್ಲಿಸಿ, ಕಾನೂನಿನ ಪ್ರಕಾರ ಕೆಲಸ ಮಾಡಿ. ಪ್ರಜಾಪ್ರಭುತ್ವ, ಕಾನೂನನ್ನು ಗೌರವಿಸಿ, ಸರಿಯಾದ ರೀತಿಯಲ್ಲಿ ಕಾನೂನನ್ನು ಜಾರಿಗೊಳಿಸದಿದ್ದರೆ ಒಂದು ದಿನ ಜನರೇ ದಂಗೆ ಏಳುತ್ತಾರೆ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ನನಗೆ ಪೊಲೀಸರ ಬಗ್ಗೆ ಕರುಣೆ ಇದೆ. ಇದು ಅವರ ತಪ್ಪು ಅಲ್ಲ. ಸಿಎಂ ಅವರ ಮೇಲೆ ಆಡಳಿತ ನಡೆಸುತ್ತಿದ್ದಾರೆ. ನಾನು ಪೊಲೀಸರಿಗೆ ಅವರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಮಾತ್ರ ನೆನಪಿಸುತ್ತಿದ್ದೇನೆ ಎಂದರು.
ರಸ್ತೆಯಲ್ಲಿ ಕುಳಿತು ಪ್ರತಿಭಟನೆ: ನಾಯ್ಡು ಅವರ ಪ್ರವಾಸದ ವೇಳೆ ಟಿಡಿಪಿ ಕಾರ್ಯಕರ್ತರು ಗ್ರಾಮಕ್ಕೆ ಪ್ರವೇಶಿಸದಂತೆ ಗುಡಿಪಲ್ಲಿಯ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿದರು. ಚಂದ್ರಬಾಬು ನಾಯ್ಡು ಅವರ ಪ್ರಚಾರ ವಾಹನವನ್ನು ವಶಪಡಿಸಿಕೊಂಡ ಎರಡು ದಿನಗಳ ನಂತರ, ಪೊಲೀಸರು ಅದನ್ನು ಅಜ್ಞಾತ ಸ್ಥಳಕ್ಕೆ ಎಳೆದೊಯ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ, ಅವರ ವಾಹನವನ್ನು ಅವರಿಗೆ ಹಿಂತಿರುಗಿಸುವಂತೆ ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ನಾನು ವಾಪಸ್ ಹೋಗುವುದಿಲ್ಲ: ನನ್ನನ್ನು ಇಲ್ಲಿಂದ ವಾಪಸ್ ಕಳುಹಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಆದರೆ ನಾನು ಹೋಗುವುದಿಲ್ಲ, ನಿಮ್ಮನ್ನು ಇಲ್ಲಿಂದ ಕಳುಹಿಸುತ್ತೇನೆ. ನೀವು ಮಾತ್ರವಲ್ಲ. ಸೈಕೋ ಸಿಎಂ ತನ್ನ ಪಕ್ಷವನ್ನು ಶಾಶ್ವತವಾಗಿ ನೆಲಕಚ್ಚುವವರೆಗೂ ತೆಲುಗು ಜನರ ಪರ ಹೋರಾಟ ಮಾಡುತ್ತೇನೆ. ನನ್ನ ಹೋರಾಟ ರಾಜ್ಯದ ಐದು ಕೋಟಿ ಜನರಿಗಾಗಿ. ಐದು ಕೋಟಿ ಜನರು ಒಂದು ಕಡೆ ಮತ್ತು ಸಿಎಂ ಇನ್ನೊಂದು ಕಡೆ ಇದ್ದಾರೆ. ಅದನ್ನು ಜಗನ್ ನೆನಪಿಟ್ಟುಕೊಳ್ಳಬೇಕು.
ಪ್ರಜಾಪ್ರಭುತ್ವದಲ್ಲಿ ಇಂತಹ ಅರಾಜಕತೆಗೆ ಜಾಗವಿಲ್ಲ. ಸ್ಥಳೀಯ ಶಾಸಕರಾಗಿ, ನನ್ನ ಮತದಾರರನ್ನು ಭೇಟಿ ಮಾಡಲು ನನಗೆ ಎಲ್ಲ ಹಕ್ಕಿದೆ. ನಾನು ನನ್ನ ಜನರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಪರಿಹರಿಸಬೇಕು. ಇದರಿಂದ ನೀವು ನನ್ನನ್ನು ಹೇಗೆ ತಡೆಯುತ್ತೀರಿ ನೋಡುತ್ತೇನೆ ಎಂದು ಚಂದ್ರಬಾಬು ನಾಯ್ಡು ಸವಾಲು ಕೂಡ ಹಾಕಿದರು.
ಕಾನೂನು ಜಾರಿ ಮಾಡದೇ ಪೊಲೀಸರು ನಿರಂಕುಶವಾಗಿ ವರ್ತಿಸುತ್ತಿದ್ದಾರೆ. ಕತ್ತಲಾದ ನಂತರ ವೈಎಸ್‌ಆರ್‌ಸಿ ನಾಯಕರು ಮಾಚರ್ಲಾ, ನಂದಿಗಾಮ ಮತ್ತು ಇತರ ಸ್ಥಳಗಳಲ್ಲಿ ರೋಡ್‌ಶೋ ನಡೆಸಲಿಲ್ಲವೇ? ರಾಜಮಹೇಂದ್ರವರಂನಲ್ಲಿ ಸಿಎಂ ಜಗನ್ ಸಭೆ ನಡೆಸಿಲ್ಲವೇ? ರೋಡ್‌ಶೋ ಮಾಡಿಲ್ಲವೇ? ನಿಮ್ಮ ಪಕ್ಷದ ನಾಯಕರು ರೋಡ್ ಶೋ ನಡೆಸುವುದಿಲ್ಲವೇ? ನನಗೆ ಮತ್ತು YSRC ನಾಯಕರಿಗೆ ಬೇರೆ ಬೇರೆ ನಿಯಮಗಳಿವೆಯೇ? ಪೊಲೀಸರು ಎಲ್ಲ ಪಕ್ಷಗಳನ್ನು ಸಮಾನವಾಗಿ ಕಂಡರೆ ಜನ ಸಹಕಾರ ನೀಡುತ್ತಾರೆ. ಕಾನೂನನ್ನು ಉಲ್ಲಂಘಿಸುವವರು ತಪ್ಪಿತಸ್ಥರು. ರಾಜ್ಯದಲ್ಲಿ ಜಗನ್ ಮೋಹನ್ ರೆಡ್ಡಿಯವರ ಆಡಳಿತ ತೊಲಗುವವರೆಗೂ ಹೋರಾಟ ನಡೆಸುವುದಾಗಿ ಇದೇ ವೇಳೆ ಚಂದ್ರಬಾಬು ನಾಯ್ಡು ಪ್ರತಿಜ್ಞೆ ಮಾಡಿದರು.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ಬಹಿರಂಗ ಸಭೆಯಲ್ಲಿ ಭಾರಿ ದುರಂತ: ಕಾಲ್ತುಳಿತಕ್ಕೆ 8 ಜನರು ಸಾವು