ಹಿಮಾಚಲ ಪ್ರದೇಶ : ರಾಜ್ಯದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಹೆಚ್ಚು ಹಾನಿಗೊಳಗಾಗಿವೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿವೆ. ಈ ಮಧ್ಯೆ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಚಂಡೀಗಢ ಮತ್ತು ಶಿಮ್ಲಾವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಈ ಚತುಷ್ಪಥ ಹೆದ್ದಾರಿ ಸೋಲನ್‌ನಲ್ಲಿ ಸುಮಾರು 50 ಮೀಟರ್‌ಗಳಷ್ಟು ಕುಸಿದಿದೆ.
2 ದಿನ ಚಂಡೀಗಢ-ಶಿಮ್ಲಾ ಹೆದ್ದಾರಿ ಬಂದ್ : ಮಂಗಳವಾರ ತಡರಾತ್ರಿ 2.30 ಕ್ಕೆ ಸೋಲನ್ ಬಳಿ ಚಂಡಿಗಢ-ಶಿಮ್ಲಾ ರಾಷ್ಟ್ರೀಯ ಹೆದ್ದಾರಿ -5 (NH-5 ) ಕುಸಿದಿದೆ. ಇದರಿಂದಾಗಿ ಕೆಲ ಗಂಟೆಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೆದ್ದಾರಿಯಲ್ಲಿ ಸಣ್ಣಪುಟ್ಟ ವಾಹನಗಳ ಓಡಾಟ ಆರಂಭಗೊಂಡಿದ್ದು, ನಂತರ ಸುರಿದ ಮಳೆಗೆ ಚಾಕಿ ಮೋರ್ ಬಳಿ ರಸ್ತೆಯ ಒಂದು ಭಾಗ ಕುಸಿದಿದೆ. ಇದರಿಂದಾಗಿ ಎರಡು ದಿನಗಳ ಕಾಲ ಈ ಹೆದ್ದಾರಿಯನ್ನು ಮುಚ್ಚಲು ಜಿಲ್ಲಾಡಳಿತ ನಿರ್ಧರಿಸಿದೆ.
50 ಮೀಟರ್ ರಸ್ತೆ ಕುಸಿತ : ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ, "ಚಾಕಿ ಮೋರ್ ಬಳಿ ರಸ್ತೆಯ ಒಂದು ಭಾಗ ಕುಸಿದಿದೆ. ಸುಮಾರು 50 ಮೀಟರ್ ರಸ್ತೆ ಕುಸಿದಿದೆ. ಹೀಗಾಗಿ, ಎರಡು ದಿನಗಳ ಕಾಲ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಎನ್‌ಎಚ್ ಮುಚ್ಚಿದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ, ಎಸ್ಪಿ ಸೋಲನ್ ಗೌರವ್ ಸಿಂಗ್ ಪರ್ಯಾಯ ಸಂಚಾರ ಮಾರ್ಗದಲ್ಲಿ ಪ್ರಯಾಣಿಸುವಂತೆ ಆದೇಶ ಹೊರಡಿಸಿ ಮನವಿ ಮಾಡಿದ್ದಾರೆ. ಜೊತೆಗೆ NH 5 ಅನ್ನು 2 ದಿನಗಳವರೆಗೆ ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಟ್ರಾಫಿಕ್ ಜಾಮ್ : ಚಂಡೀಗಢ - ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇಬು, ಟೊಮೆಟೊ ಮತ್ತು ಪೇರಳೆ ಹಣ್ಣುಗಳನ್ನು ಸಾಗಿಸುವ 100ಕ್ಕೂ ಹೆಚ್ಚು ಟ್ರಕ್‌ಗಳು ಸಿಲುಕಿಕೊಂಡಿದ್ದವು. ಮಂಗಳವಾರ ರಾತ್ರಿಯಿಂದ ಸುಮಾರು 15 ರಿಂದ 20 ಬಸ್‌ಗಳು ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದವು. ಬುಧವಾರ, ಆಡಳಿತವು ಸಣ್ಣ ವಾಹನಗಳು ಪ್ರಯಾಣಿಸಲು ಅವಕಾಶ ನೀಡಿತು. ಆದರೆ ಮತ್ತೆ ಮಳೆ ಪ್ರಾರಂಭವಾದ ಹಿನ್ನೆಲೆ ಸಂಜೆ 4 ಗಂಟೆಗೆ ಸಂಪೂರ್ಣವಾಗಿ ಮುಚ್ಚಲಾಯಿತು. ಈಗ ಎಲ್ಲಾ ವಾಹನಗಳು ಬದಲಿ ಮಾರ್ಗದ ಮೂಲಕ ಸಾಗುತ್ತಿವೆ.
ಇನ್ನು ರಾಷ್ಟ್ರೀಯ ಹೆದ್ದಾರಿ-5 ಅನ್ನು ಮುಚ್ಚಿರುವುದರಿಂದ ಹಾಲು, ಬ್ರೆಡ್, ದಿನಪತ್ರಿಕೆಗಳು ಅಥವಾ ಇತರ ಅಗತ್ಯ ವಸ್ತುಗಳ ಪೂರೈಕೆಯನ್ನು ಬದಲಿ ಮಾರ್ಗಗಳ ಮೂಲಕ ಮಾಡಲಾಗುತ್ತದೆ. ಸದ್ಯಕ್ಕೆ ಎರಡು ದಿನಗಳಿಂದ ಹೆದ್ದಾರಿ ಬಂದ್ ಆಗಿದ್ದು, ಮಳೆ ನಿಂತ ಬಳಿಕ ಸ್ಥಳ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ : Mullayyanagiri: ಭಾರಿ ಮಳೆ, ಅಲ್ಲಲ್ಲಿ ಭೂಕುಸಿತ; ಮುಳ್ಳಯ್ಯನಗಿರಿ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರಾಖಂಡದಲ್ಲೂ ಭೂಕುಸಿತ : ಮತ್ತೊಂದೆಡೆ, ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಹ ಭೂಕುಸಿತ ಸಂಭವಿಸಿದೆ. ಚಮೋಲಿಯ ನಂದಪ್ರಯಾಗ ಮತ್ತು ಚಿಂಕಾ ಬಳಿ ರಸ್ತೆ ಕುಸಿದಿದೆ. ಚಮೋಲಿ ಪೊಲೀಸರು ಸ್ಥಳದ ದೃಶ್ಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಮಂಗಳವಾರ ಮುಂಜಾನೆ, ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯ ಪಿಪಾಲ್ಕೋಟಿ ಬಳಿ ರಸ್ತೆ ಕುಸಿದ ಪರಿಣಾಮ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚುಂಗಿ ಬಡೇತಿ ಸುರಂಗ ಪ್ರದೇಶದ ಸುತ್ತಲು ಭೂಕುಸಿತ ಸಂಭವಿಸಿದೆ. ವಿಷಯ ತಿಳಿದ ಬಳಿಕ, ಜಿಲ್ಲ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಅವರು ಸುರಂಗದ ಸುರಕ್ಷತೆಯ ಬಗ್ಗೆ ಸಂಬಂಧಪಟ್ಟ ಕಾರ್ಯನಿರ್ವಾಹಕ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.