ಹೈದರಾಬಾದ್ ಡೆಸ್ಕ್: ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶದ ಹೆಮ್ಮೆಯ ಪುತ್ರ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಭಗತ್ ಸಿಂಗ್ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಮಾಸಿಕ ಕಾರ್ಯಕ್ರಮವಾದ "ಮನ್ ಕಿ ಬಾತ್" ರೇಡಿಯೋ ಕಾರ್ಯಕ್ರಮದ 93ನೇ ಸಂಚಿಕೆಯಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿ, ಸೆಪ್ಟೆಂಬರ್ 28 ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಮೃತ ಮಹೋತ್ಸವ ನಡೆಯಲಿದೆ. ವೀರಪುತ್ರನ ಸ್ಮರಣೆ ಹಿನ್ನೆಲೆಯ ಚಂಡೀಗಢದ ವಿಮಾನ ನಿಲ್ದಾಣವನ್ನು ಇನ್ನು ಮುಂದೆ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಲಾಗುವುದು ಎಂದರು.
ಈ ಮೊದಲು ಪ್ರಧಾನಿ ಕಚೇರಿ ಕೂಡ ಭಗತ್ ಸಿಂಗ್ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲು ಮಹತ್ವದ ನಿರ್ಧಾರವನ್ನು ಘೋಷಿಸಲಾಗುವುದು ಎಂದು ಟ್ವೀಟ್ ಮಾಡಿತ್ತು.
2ನೇ ವೀರಪುತ್ರನಿಗೆ ನಮನ: ಕೆಲ ದಿನಗಳ ಹಿಂದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್ನ ಕರ್ತವ್ಯ ಪಥದಲ್ಲಿ ಸ್ಥಾಪಿಸಲಾಗಿತ್ತು. ಅಲ್ಲಿ ಈ ಮೊದಲು ಕಿಂಗ್ ಜಾರ್ಜ್ ವಿಗ್ರಹ ನಿಲ್ಲಿಸಲಾಗಿತ್ತು. ಅದೇ ಜಾಗದಲ್ಲಿ ನೇತಾಜಿಯ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಿ ಗೌರವ ಸಲ್ಲಿಸಲಾಗಿತ್ತು. ಇದೀಗ ಭಗತ್ ಸಿಂಗ್ ಅವರಿಗೆ ಗೌರವಸೂಚಕವಾಗಿ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗಿದೆ.
ಇದಕ್ಕೂ ಮೊದಲು ಪಂಜಾಬ್‌ನಲ್ಲಿ ಆಡಳಿತದಲ್ಲಿರುವ ಆಪ್ ಸರ್ಕಾರ ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡುವ ಕುರಿತು ನಿರ್ಧಾರ ತೆಗೆದುಕೊಂಡಿತ್ತು. ಈ ಕುರಿತಾಗಿ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ನಡುವೆ ಒಪ್ಪಂದ ಕೂಡ ನಡೆದಿತ್ತು.
ಇದನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಆಗಸ್ಟ್ 20 ರಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಹರಿಯಾಣದ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರನ್ನು ಭೇಟಿ ಮಾಡಿ ಈ ಕುರಿತಾಗಿ ಚರ್ಚಿಸಿದ ಬಗ್ಗೆ ಹೇಳಿಕೊಂಡಿದ್ದರು.
ಓದಿ: ಇಂಡೋ ಫೆಸಿಫಿಕ್ ರಾಷ್ಟ್ರಗಳ ಅಭಿವೃದ್ಧಿಗೆ ಜಿ 20 ಸದಸ್ಯರೊಂದಿಗೆ ಕೆಲಸ.. ಜೈಶಂಕರ್