ಪಾಟ್ನಾ(ಬಿಹಾರ): ಡಿಗ್ರಿ ಪಡೆದುಕೊಂಡು ಉದ್ಯೋಗ ಸಿಗದೇ ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವ ಅನೇಕ ಉದಾಹರಣೆ ನಮ್ಮ ಕಣ್ಮುಂದಿವೆ. ಆದರೆ, ಇಲ್ಲೋರ್ವ ಯುವತಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡು ಉದ್ಯೋಗ ಸಿಗದ ಕಾರಣ, ಚಹಾ ಅಂಗಡಿ ತೆರೆದು ಅದರಲ್ಲಿ ಯಶಸ್ಸು ಕಂಡಿದ್ದಾಳೆ. ಈ ಮೂಲಕ ಅನೇಕ ಯುವಕ-ಯುವತಿಯರಿಗೆ ಮಾದರಿಯಾಗಿದ್ದಾಳೆ.
2019ರಲ್ಲಿ ಪದವಿ ಪಡೆದುಕೊಂಡ ಪಾಟ್ನಾದ ಪ್ರಿಯಾಂಕಾ ಗುಪ್ತಾ, ಉದ್ಯೋಗಕ್ಕಾಗಿ ಹುಡುಕಿ, ಎರಡು ವರ್ಷಗಳ ಕಾಲ ಯಾವುದೇ ಕೆಲಸ ಸಿಗದ ಕಾರಣ ಚಹಾ ಅಂಗಡಿ ಓಪನ್ ಮಾಡಲು ನಿರ್ಧರಿಸುತ್ತಾಳೆ. ಅದರಂತೆ ಪಾಟ್ನಾದ ಮಹಿಳಾ ಕಾಲೇಜ್ನ ಎದುರುಗಡೆ ಚಹಾ ಅಂಗಡಿ ಓಪನ್ ಮಾಡಿದ್ದು, ಇದೀಗ ಅದರಲ್ಲಿ ಯಶಸ್ವಿಯಾಗಿದ್ದಾಳೆ. 24 ವರ್ಷದ ಪ್ರಿಯಾಂಕಾ, ಚಹಾ ಅಂಗಡಿಯಲ್ಲಿ ಅತಿ ಕಡಿಮೆ ಬೆಲೆಗೆ ಕುಲ್ಹಾದ್ ಟೀ, ಮಸಾಲಾ ಟೀ, ಪಾನ್ ಚಹಾ ಮತ್ತು ಚಾಕೊಲೆಟ್ ಟೀ ಮಾರಾಟ ಮಾಡ್ತಿದ್ದಾಳೆ.
ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಳ್ಳುತ್ತಿದ್ದಂತೆ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಪ್ರಿಯಾಂಕಾಗೆ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ಇದರಿಂದ ಬೇರೆಯವರಂತೆ ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವ ಬದಲಾಗಿ, ಚಹಾ ಮಾರಾಟ ಮಾಡುವ ಕೆಲಸಕ್ಕೆ ಮುಂದಾಗುತ್ತಾರೆ.
ಇದನ್ನೂ ಓದಿ: ಬಾಂಗ್ಲಾದ ನಿರಾಶ್ರಿತ ಹಿಂದೂ ಬೆಂಗಾಳಿ ಕುಟುಂಬಗಳಿಗೆ ಕೃಷಿ ಭೂಮಿ, ನಿವೇಶನ ಕೊಟ್ಟ ಯುಪಿ ಸರ್ಕಾರ
ಅತಿ ಕಡಿಮೆ ಅವಧಿಯಲ್ಲಿ ಟೀ ಸ್ಟಾಲ್ ಹೆಚ್ಚು ಜನಪ್ರಿಯವಾಗಿದ್ದು, ಕೇವಲ 15ರಿಂದ 20ರೂಪಾಯಿಗೆ ಚಹಾ ಮಾರಾಟ ಮಾಡ್ತಿರುವ ಕಾರಣ, ಇದೀಗ ಹೆಚ್ಚಿನ ಆದಾಯ ಸಹ ಗಳಿಕೆ ಮಾಡ್ತಿದ್ದಾಳೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರಿಯಾಂಕಾ, ಬ್ಯಾಂಕ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುತ್ತೀರ್ಣವಾದ ಬಳಿಕ, ಚಹಾ ಅಂಗಡಿ ಓಪನ್ ಮಾಡುವ ನಿರ್ಧಾರ ಮಾಡಿದ್ದೇನೆ. ಇದೀಗ ಸ್ವಂತ ಚಹಾ ಅಂಗಡಿ ನಡೆಸುತ್ತಿದ್ದು, ಆರಂಭದಲ್ಲಿ ನನ್ನ ಸ್ನೇಹಿತರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಇದೀಗ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ.
ಪ್ರಿಯಾಂಕಾ ತಮ್ಮ ಟೀ ಸ್ಟಾಲ್ಗೆ 'ಚಾಯ್ ವಾಲಿ' ಎಂದು ಹೆಸರಿಟ್ಟಿದ್ದು, ಬೆಂಗಳೂರಿನ ಎಂಬಿಎ ಚಾಯ್ ವಾಲಾ ಎಂದೇ ಖ್ಯಾತಿ ಪಡೆದಿರುವ ಪ್ರಫುಲ್ ಬಿಲೋರ್ ಅವರನ್ನ ಮಾದರಿಯಾಗಿಟ್ಟುಕೊಂಡಿದ್ದಾರೆ. ಅವರ ಶಾಪ್ನ ಕೆಲವೊಂದು ಪಂಚ್ ಲೈನ್ ತಮ್ಮ ಅಂಗಡಿಯಲ್ಲಿ ಬರೆದುಕೊಂಡಿದ್ದಾರೆ.