ಹೈದರಾಬಾದ್ (ತೆಲಂಗಾಣ): ಹೈದರಾಬಾದ್ನಲ್ಲಿ ಹೆಡ್ ಕಾನ್ಸ್ಟೇಬಲ್ಗೆ ಚಾಕುವಿನಿಂದ ಹಲ್ಲೆ ಇರಿದ ಆರೋಪ ಪ್ರಕರಣದಲ್ಲಿ ಕರ್ನಾಟಕದ ಇಬ್ಬರು ಸರಗಳ್ಳರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಈ ಬಂಧಿತ ಆರೋಪಿಗಳು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯವಾಗಿದ್ದಾರೆ.
ಇದೇ ಜುಲೈ 26ರಂದು ಹೈದರಾಬಾದ್ನ ವಿವಿಧ ಸ್ಥಳಗಳಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಆರೋಪಿಗಳ ಬಗ್ಗೆ ಸಂಶಯಗೊಂಡು ಹೆಡ್ ಕಾನ್ಸ್ಟೇಬಲ್ ಯಾದಯ್ಯ ಮತ್ತು ಇತರ ಪೊಲೀಸ್ ಸಿಬ್ಬಂದಿ ಬಂಧಿಸಲು ಯತ್ನಿಸಿದ್ದರು. ಆದರೆ, ಆಗ ಪೊಲೀಸರ ಮೇಲೆ ಓರ್ವ ಆರೋಪಿ ದಾಳಿ ಮಾಡಿದ್ದ. ಇಷ್ಟೇ ಅಲ್ಲ, ಯಾದಯ್ಯಗೆ ಚಾಕುವಿನಿಂದ ಎದೆ, ಹೊಟ್ಟೆ, ಬೆನ್ನು ಹಾಗೂ ಎಡಗೈಗೆ ಇರಿದು ಪರಾರಿಯಾಗಿದ್ದ.
ಇದೀಗ ಹೆಡ್ ಕಾನ್ಸ್ಟೇಬಲ್ ಯಾದಯ್ಯಗೆ ಚಾಕು ಇರಿದ ಆರೋಪಿ ಸೇರಿ ಒಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಪಿಸ್ತೂಲ್, ರಿವಾಲ್ವರ್ ಹಾಗೂ 15 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪಿಸ್ತೂಲ್, ರಿವಾಲ್ವರ್ ಅನ್ನು ಉತ್ತರ ಪ್ರದೇಶದಿಂದ ಆರೋಪಿಗಳು ಖರೀದಿಸಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ, ಬಂಧಿತರಿಂದ ಎರಡು ಮೊಬೈಲ್ ಫೋನ್‌ಗಳು, ದ್ವಿಚಕ್ರ ವಾಹನ, ಎರಡು ಚಾಕುಗಳು ಮತ್ತು ಸುಮಾರು 47 ಗ್ರಾಂ ತೂಕದ ಮೂರು ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ. ಈ ಇಬ್ಬರು ಸರಗಳ್ಳರು ಜುಲೈ 25 ಮತ್ತು ಜುಲೈ 26ರ ನಡುವೆ ಐದು ಕಳ್ಳತನ ಕೃತ್ಯಗಳನ್ನು ಎಸಗಿದ್ದಾರೆ. ಇಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಂದ ಚಿನ್ನಾಭರಣಗಳನ್ನು ದೋಚಿದ್ದರು ಎಂದೂ ವಿವರಿಸಿದ್ದಾರೆ.
ಬಂಧಿತರಾದ ಇವರಿಬ್ಬರು ಕರ್ನಾಟಕದಲ್ಲೂ ಕಳ್ಳತನದಲ್ಲಿ ತೊಡಗಿದ್ದರು. ಇದೊಂದು ಗ್ಯಾಂಗ್ ಇರುವ ಶಂಕೆ ಇದ್ದು, ಈ ಗ್ಯಾಂಗ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಭೇಟಿ ಬೆನ್ನಲ್ಲೇ ಮಂಗಳೂರಿನಲ್ಲಿ ಮತ್ತೊಂದು ಹತ್ಯೆ: ಯುವಕನ ಬರ್ಬರ ಕೊಲೆ