ಮುಂಬೈ: ತೈಲ ಬೆಲೆಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸುಮಾರು 45 ಸಾವಿರ ಕೋಟಿ ರೂಪಾಯಿ ನಷ್ಟ ಆಗಲಿದೆ ಎಂದು ಜಪಾನ್ ಮೂಲದ ಬ್ರೋಕರೇಜ್ ಕಂಪನಿ ನೋಮುರ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ಈ ತೀರ್ಮಾನದಿಂದಾಗಿ ಕೇಂದ್ರದ ವಿತ್ತೀಯ ಕೊರತೆಯು ಶೇಕಡ 0.3ರಷ್ಟು ಹೆಚ್ಚಾಗಲಿದೆ ಎಂದು ಸಂಸ್ಥೆ ಹೇಳಿದೆ. ಒಟ್ಟು ಒಂದು ವರ್ಷದಲ್ಲಿ 1 ಲಕ್ಷ ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಲವೇ ತಿಂಗಳು ಬಾಕಿಯಿದ್ದು, ಸುಮಾರು 45 ಸಾವಿರ ಕೋಟಿ ರೂಪಾಯಿ ನಷ್ಟವಾಗುವುದಾಗಿ ನೋಮುರಾ ಅಂದಾಜು ಮಾಡಿದೆ.
ಈ ಮೊದಲು ಶೇಕಡಾ 6.2ರಷ್ಟು ಹಣಕಾಸು ಕೊರತೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ತೈಲ ಬೆಲೆ ಇಳಿಕೆಯಿಂದಾಗಿ ಕೇಂದ್ರ ಸರ್ಕಾರದ ಹಣಕಾಸು ಕೊರತೆ ಪ್ರಮಾಣವು ಶೇಕಡಾ 6.5ಕ್ಕೆ ಏರಿಕೆಯಾಗಬಹುದು ಎಂದು ಸಂಸ್ಥೆ ಹೇಳಿದೆ.
ಈಗಿನ ಅಬಕಾರಿ ಸುಂಕ ಕಡಿತದ ನಂತರ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಪ್ರಮಾಣವು ಶೇಕಡಾ 0.14ರಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಪರೋಕ್ಷ ಪರಿಣಾಮಗಳನ್ನೂ ಪರಿಗಣಿಸಿದರೆ ಒಟ್ಟಾರೆ ಹಣದುಬ್ಬರವು ಶೇಕಡಾ 0.3ರವರೆಗೆ ತಗ್ಗಬಹುದು ಎಂದು ನೋಮುರಾ ಹೇಳಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಶುಭಕೋರಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್