ನವದೆಹಲಿ : ಸೂರಿಲ್ಲದ ಜನರು ಮತ್ತು ಭಿಕ್ಷುಕರಿಗೆ ಲಸಿಕೆ ಹಾಕಲು ನರೇಂದ್ರ ಮೋದಿ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ ಅಧಿವೇಶನಗಳನ್ನು ನಡೆಸಲು ನಿರ್ದೇಶನ ನೀಡಿದೆ.
ಅಂತಹ ಜನರಿಗೆ ಲಸಿಕೆ ನೀಡಲು ಸ್ವಯಂಸೇವಕ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ವಿಶೇಷ ಅಭಿಯಾನಗಳನ್ನು ನಡೆಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಆದೇಶ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಶುಕ್ರವಾರ ನೋಟಿಸ್ ನೀಡಲಾಗಿದೆ.
ಈ ಕಾರ್ಯವನ್ನು ನಿರ್ವಹಿಸಲು ಆಡಳಿತ ಸರ್ಕಾರವು ಎನ್‌ಜಿಒಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸಹಾಯವನ್ನು ತೆಗೆದುಕೊಳ್ಳಬಹುದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಸುಪ್ರೀಂಕೋರ್ಟ್ ಇತ್ತೀಚೆಗೆ ಪಾದಚಾರಿ ಮಾರ್ಗದಲ್ಲಿ ವಾಸಿಸುವ ಜನರು ಮತ್ತು ಭಿಕ್ಷುಕರ ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
ಜಸ್ಟಿಸ್ ಡಿ.ವೈ.ಚಂದ್ರಚಾದ್ ಮತ್ತು ನ್ಯಾಯಮೂರ್ತಿ ಎಂ.ಆರ್.ಶಾ ಅವರ ನ್ಯಾಯಪೀಠವು, ಭಿಕ್ಷುಕರನ್ನು ರಸ್ತೆಬದಿಯಿಂದ ಹೊರದಬ್ಬುವ ಆದೇಶವನ್ನು ನೀಡಲು ಸಾಧ್ಯವಿಲ್ಲ. ಅವರು ಬಡವರಾಗಿದ್ದರಿಂದ ತಾನೆ ಈ ರೀತಿ ಮಾಡುತ್ತಿದ್ದಾರೆ ಎಂದು ಪೀಠ ಹೇಳಿತ್ತು.