ನವದೆಹಲಿ: ವಾಯು ಮಾಲಿನ್ಯ ನಿಯಂತ್ರಣ ಮತ್ತು ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೇ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು ನೀಡುವ ಸಲುವಾಗಿ ಬಿಎಸ್ 6 ಹೊರಸೂಸುವಿಕೆಯ ಮಾನದಂಡದ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಇತ್ತೀಚೆಗೆ ಇ ವಾಹನಗಳಿಗೆ ಮತ್ತು ಚಾರ್ಜಿಂಗ್ ಪಾಯಿಂಟ್ ಒತ್ತು ನೀಡುತ್ತಿದೆ.
ಈ ನಡುವೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಗೆ ಸೇರಿದ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ಹೇಳಿದ್ದಾರೆ. ಮಾಹಿತಿ ಪ್ರಕಾರ, ರಸ್ತೆ ಸಾರಿಗೆ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದೆ ಮತ್ತು ಅಧಿಸೂಚನೆಯ ಪ್ರಕಾರ 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಏಪ್ರಿಲ್ 2023 ರೊಳಗೆ ರದ್ದುಗೊಳಿಸಲಾಗುವುದು. ಇವುಗಳಲ್ಲಿ ಸಾರಿಗೆ ನಿಗಮಗಳ ಒಡೆತನದ ಬಸ್‌ಗಳೂ ಸೇರಿವೆ.
ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಗೆ ಖಾಸಗಿ ವಾಹನ ಮಾಲೀಕರಿಂದ ನೀರಸ ಪ್ರತಿಕ್ರಿಯೆಯ ನಡುವೆ ರಸ್ತೆ ಸಾರಿಗೆ ಸಚಿವಾಲಯ ಈ ಹೊಸ ಅಧಿಸೂಚನೆಯನ್ನು ಪ್ರಸ್ತಾಪಿಸುವ ಕರಡನ್ನು ಸಿದ್ಧಪಡಿಸಿದೆ. ಸ್ಕ್ರ್ಯಾಪಿಂಗ್ ನೀತಿಯು ವೈಯಕ್ತಿಕ ಮತ್ತು ವಾಣಿಜ್ಯ ವಾಹನಗಳಿಗೆ ಸ್ವಯಂಪ್ರೇರಿತವಾಗಿದ್ದರೂ, ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ಮತ್ತು ಸ್ವಾಯತ್ತ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಏಜೆನ್ಸಿಗಳಿಗೆ ಇದು ಕಡ್ಡಾಯವಾಗಿರುತ್ತದೆ.
ಸ್ವಯಂಪ್ರೇರಿತ ವಾಹನ ಗುಜರಿ ನೀತಿಯಲ್ಲಿ ಹಳೆಯ ವಾಹನಗಳನ್ನು ಕೊಡುವವರಿಗೆ ಹೊಸ ವಾಹನ ಖರೀದಿಸುವಾಗ ಶೇ.5ರಷ್ಟು ಡಿಸ್ಕೌಂಟ್ ದರ ಸೇರಿದಂತೆ ಹಲವು ಅನುಕೂಲಗಳನ್ನು ಕಲ್ಪಿಸಲಾಗಿತ್ತು. ಆದರೆ ಈ ಯೋಜನೆ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಪಡೆಯದ ಕಾರಣ ಕಡ್ಡಾಯಗೊಳಿಸುವ ಚಿಂತನೆಯಲ್ಲಿ ಸರ್ಕಾರ ಇದೆ.
ಇದನ್ನೂ ಓದಿ: 15 ವರ್ಷ ಹಳೆಯ ಸರ್ಕಾರಿ ವಾಹನಗಳ ನೋಂದಣಿ ರದ್ದು: ಇದಕ್ಕೆ ನಿಮ್ಮ ಅಭಿಪ್ರಾಯವೇನು?