ನವದೆಹಲಿ: 2024ರ ವೇಳೆಗೆ ರಸ್ತೆ ಅಪಘಾತ ಸಾವುಗಳನ್ನು ಶೇಕಡಾ 50ರಷ್ಟು ಕಡಿಮೆ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
'ರಸ್ತೆ ಅಪಘಾತಗಳ ಸಾವುಗಳ ತಡೆಯುವಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಪಾತ್ರ' ಕುರಿತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಆಯೋಜಿಸಿದ್ದ ಸಭೆಯಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ಮಾತನಾಡಿದ ನಿತಿನ್ ಗಡ್ಕರಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿ ರಾಜ್ಯ, ಜಿಲ್ಲೆ ಮತ್ತು ನಗರಗಳಲ್ಲಿ ಅಪಘಾತ ವಲಯಗಳನ್ನು ಗುರುತಿಸುವ ಅಗತ್ಯವನ್ನು ಕೇಂದ್ರ ಸಚಿವರು ಒತ್ತಿ ಹೇಳಿದ್ದು, ಈಗಾಗಲೇ ವಿಶ್ವಬ್ಯಾಂಕ್ ಮತ್ತು ಎಡಿಬಿ (ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್) ಒಂದು ಯೋಜನೆಯನ್ನು ಮಂಜೂರು ಮಾಡಿದ್ದು, ಕೇಂದ್ರವು ರಾಜ್ಯಗಳಿಗೆ 14,000 ಕೋಟಿ ರೂ.ಗಳನ್ನು ಮೀಸಲಿಡುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಎಂಜಿನಿಯರಿಂಗ್, ಆರ್ಥಿಕತೆ, ಜಾರಿಗೊಳಿಸುವಿಕೆ, ಶಿಕ್ಷಣ (4E-Engineering, Economy, Enforcement and Education) ಎಂಬ ನಾಲ್ಕು ಅಂಶಗಳ ಮೂಲಕ ರಸ್ತೆ ಸುರಕ್ಷತೆ ಕಾಪಾಡಿಕೊಂಡು ಅಪಘಾತ ಮತ್ತು ಸಾವು- ನೋವುಗಳನ್ನು ಕಡಿಮೆ ಮಾಡಲು ಸಚಿವಾಲಯ ಶ್ರಮಿಸುತ್ತಿದೆ ಎಂದಿರುವ ಅವರು ಕಾರ್ಪೊರೇಟ್ ಸಂಸ್ಥೆಗಳು ಅಪಘಾತಗಳ ಹಿಂದಿನ ಕಾರಣಗಳನ್ನು ಗುರುತಿಸಲು ಸ್ವತಂತ್ರ ಸಮೀಕ್ಷೆಗಳನ್ನು ನಡೆಸಬೇಕು ಮತ್ತು ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಬಹುದೆಂದು ಸಲಹೆ ನೀಡಿದರು.
ಇದನ್ನೂ ಓದಿ: ನಂದಿಗ್ರಾಮ ಮರು ಮತ ಎಣಿಕೆಯ ಅರ್ಜಿ ಇಂದು ಕಲ್ಕತ್ತಾ ಹೈಕೋರ್ಟ್ನಲ್ಲಿ ವಿಚಾರಣೆ
ಶೇ 50ರಷ್ಟು ರಸ್ತೆ ಅಪಘಾತಗಳು ರಸ್ತೆ ಎಂಜಿನಿಯರಿಂಗ್ ಸಮಸ್ಯೆಗಳಿಂದಾಗಿವೆ. ಈ ಅಪಘಾತಗಳನ್ನು ತಡೆಯಲು ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿ 'ಶೂನ್ಯ ರಸ್ತೆ ಅಪಘಾತ'ದ ದೃಷ್ಟಿಗೆ ಹೆಚ್ಚಿನ ಒತ್ತು ನೀಡುತ್ತದೆ. ಎನ್‌ಜಿಒಗಳು, ಸಾಮಾಜಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಸಹಕಾರ ಅಪಘಾತಗಳನ್ನು ತಡೆಯಲು ಅಗತ್ಯವಾಗಿದೆ ಎಂದು ಮನವಿ ಮಾಡಿದರು.