ಕೋಲ್ಕತ್ತಾ: ರಾಜ್ಯಕ್ಕೆ ಆಮ್ಲಜನಕ ಪೂರೈಕೆ ವಿಷಯದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ದಾಳಿ ನಡೆಸಿದ್ದಾರೆ.
ಬಂಗಾಳಕ್ಕೆ ಮಂಜೂರು ಮಾಡಿದ ಆಮ್ಲಜನಕ ಸಿಲಿಂಡರ್‌ಗಳನ್ನು ಕೇಂದ್ರ ಸರ್ಕಾರವು ಉತ್ತರ ಪ್ರದೇಶಕ್ಕೆ ಕಳುಹಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಶುಕ್ರವಾರ ದುರ್ಗಾಪುರದಲ್ಲಿ ನಡೆದ ವರ್ಚುಯಲ್ ರ‍್ಯಾಲಿಯಲ್ಲಿ ಭಾಷಣ ಮಾಡುವಾಗ ಈ ಗಂಭೀರ ಆರೋಪ ಮಾಡಿದ್ದಾರೆ. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ತೀವ್ರವಾಗಿದೆ. ಪಶ್ಚಿಮ ಬಂಗಾಳಕ್ಕೆ ನಿಗದಿಪಡಿಸಿದ ಆಮ್ಲಜನಕವನ್ನು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಇಂತಹ ಬೆಳವಣಿಗೆ ಅತ್ಯಂತ ದುರದೃಷ್ಟಕರ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ಬಿಜೆಪಿ ಆಡಳಿತದ ರಾಜ್ಯಗಳು ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಪಡೆದುಕೊಳ್ಳುತ್ತಿವೆ. ಈ ನಡುವೆ ನಾವು ಎಲ್ಲಿಂದ ಈಗ ಆಮ್ಲಜನಕವನ್ನು ಪಡೆಯಬೇಕು ಎಂದು ಪ್ರಶ್ನಿಸಿದ್ದಾರೆ.
ಆದಾಗ್ಯೂ ಕೂಡ ರಾಜ್ಯ ಸರ್ಕಾರ ಕೊರೊನಾ ಚಿಕಿತ್ಸೆಗಾಗಿ ಆಮ್ಲಜನಕದ ಪೂರೈಕೆ ಸಂಬಂಧ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾವು ಕೈಗಾರಿಕಾ ವಲಯದಿಂದ ಆಮ್ಲಜನಕವನ್ನು ಎರವಲು ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.