ಹೈದರಾಬಾದ್: ದೇಶದಲ್ಲಿ ಒಮಿಕ್ರಾನ್ ವೈರಸ್ ಹಾವಳಿಗೆ ಆರಂಭದಲ್ಲಿಯೇ ತಡೆಹಾಕಲು ಕೇಂದ್ರ ಸರ್ಕಾರ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯೊಂದನ್ನು ಕಡ್ಡಾಯಗೊಳಿಸಿದೆ.
ಡಿಸೆಂಬರ್ 19 ರ ಮಧ್ಯರಾತ್ರಿಯಿಂದ ಒಮಿಕ್ರಾನ್ ಗಂಡಾಂತರ ಅನುಭವಿಸುತ್ತಿರುವ ದೇಶಗಳಿಂದ ಭಾರತಕ್ಕೆ ಬರಬೇಕಾದರೆ ವಿಮಾನದ ಟಿಕೆಟ್ ಬುಕ್ ಜೊತೆಗೆ, ಕೊರೊನಾ ಆರ್ಟಿ-ಪಿಸಿಆರ್ ಟೆಸ್ಟ್ಗೂ ಕೂಡ ಮುಂಗಡವಾಗಿ ಕಾಯ್ದಿರಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸುತ್ತೋಲೆ ಹೊರಡಿಸಿದೆ.
ಸದ್ಯ ಒಮಿಕ್ರಾನ್ ವೈರಸ್ನ ಗಂಡಾಂತರ ಎದುರಿಸುತ್ತಿರುವ ದೇಶಗಳಾದ ಅಮೆರಿಕ, ಯುರೋಪಿಯನ್ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನಾ, ಚೀನಾ, ಘಾನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ, ತಾಂಜೇನಿಯಾ, ಹಾಂಕಾಂಗ್ ಮತ್ತು ಇಸ್ರೇಲ್ಗಳಿಂದ ಬರುವ ಪ್ರಯಾಣಿಕರು ಕಡ್ಡಾಯ ಕೊರೊನಾ ಟೆಸ್ಟ್ಗೆ ಒಳಗಾಗಬೇಕು.
ಇದನ್ನೂ ಓದಿ: ಕಾಶಿ ಯಾತ್ರೆ ಮುಗಿಸಿ ರಾಜಧಾನಿಗೆ ಹಿಂದಿರುಗಿದ ಪ್ರಧಾನಿ
ಒಂದು ವೇಳೆ ಟೆಸ್ಟ್ಗೆ ಕಾದಿರಿಸದಿದ್ದರೆ, ಅಂತಹ ಪ್ರಯಾಣಿಕರ ಮೇಲೆ ಸಂಬಂಧಿತ ವಿಮಾನಯಾನ ಸಂಸ್ಥೆಗಳೇ ನಿಗಾ ವಹಿಸಬೇಕು. ವಿಮಾನ ನಿಲ್ದಾಣದಲ್ಲಿ ನೋಂದಣಿ ಕೇಂದ್ರವನ್ನು ಆರಂಭಿಸಬೇಕು ಎಂದು ಸೂಚಿಸಿದೆ. ದೇಶದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಕೋಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ಇದೀಗ ಕಟ್ಟೆಚ್ಚರ ವಹಿಸಲಾಗಿದೆ.