ನವದೆಹಲಿ: ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಮತ್ತು ನಗದು ವಿನಿಮಯ (ಎನ್‌ಕ್ಯಾಶ್)ಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ)ಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ನವೆಂಬರ್ 6ರಿಂದ ನವೆಂಬರ್ 20ರವರೆಗೆ ತನ್ನ 29 ಅಧಿಕೃತ ಶಾಖೆಗಳ ಮೂಲಕ ಚುನಾವಣಾ ಬಾಂಡ್‌ಗಳ ವಿತರಣೆ ಹಾಗೂ ಎನ್‌ಕ್ಯಾಶ್ ಮಾಡಲು ಅನುಮೋದನೆ ನೀಡಲಾಗಿದೆ.
ರಾಜಕೀಯ ನಿಧಿಯ ಮೂಲವಾಗಿರುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರದಿಂದ ಪ್ರಕಟಣೆ ಹೊರಬಿದ್ದಿದೆ. ಚುನಾವಣಾ ಬಾಂಡ್‌ಗಳು ಬಿಡುಗಡೆಯಾದ ದಿನಾಂಕದಿಂದ 15 ಕ್ಯಾಲೆಂಡರ್ ದಿನಗಳವರೆಗೆ ಮಾನ್ಯವಾಗಿರುತ್ತವೆ. ಸಿಂಧುತ್ವದ ಅವಧಿ ಮುಗಿದ ನಂತರ ಚುನಾವಣಾ ಬಾಂಡ್ ಠೇವಣಿ ಮಾಡಿದರೆ ಯಾವುದೇ ಪಾವತಿದಾರ ರಾಜಕೀಯ ಪಕ್ಷಕ್ಕೆ ಯಾವುದೇ ಪಾವತಿ ಮಾಡಲು ಆಗುವುದಿಲ್ಲ ಎಂದು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅರ್ಹ ರಾಜಕೀಯ ಪಕ್ಷವು ತನ್ನ ಖಾತೆಯಲ್ಲಿ ಠೇವಣಿ ಮಾಡಿದ ಚುನಾವಣಾ ಬಾಂಡ್ ಅನ್ನು ಅದೇ ದಿನದಲ್ಲಿ ಜಮಾ ಮಾಡಲಾಗುತ್ತದೆ. ಚುನಾವಣಾ ಬಾಂಡ್‌ಗಳ ಯೋಜನೆಯ ನಿಬಂಧನೆಗಳ ಪ್ರಕಾರ, ಅಂತಹ ಬಾಂಡ್‌ಗಳನ್ನು ಒಬ್ಬ ವ್ಯಕ್ತಿ ಭಾರತದ ಪ್ರಜೆ ಅಥವಾ ಭಾರತದಲ್ಲಿ ಸಂಘಟಿತ ಅಥವಾ ಸ್ಥಾಪಿಸಿದ ವ್ಯಕ್ತಿಯಿಂದ ಖರೀದಿಸಬಹುದು. ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳೊಂದಿಗೆ ಜಂಟಿಯಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು ಎಂದು ಹೇಳಿದೆ.
ಇದನ್ನೂ ಓದಿ: ರಾಜಕೀಯ ಪಕ್ಷಗಳ ಹಣದ ಮೂಲ ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇಲ್ಲ: ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಅಫಿಡವಿಟ್
ಪ್ರಜಾಪ್ರತಿನಿಧಿ ಕಾಯ್ದೆ-1951 (1951ರ 43) ಸೆಕ್ಷನ್ 29ಎ ಅಡಿ ನೋಂದಾಯಿಸಲಾದ ರಾಜಕೀಯ ಪಕ್ಷಗಳು ಮತ್ತು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸದನದ ಅಥವಾ ರಾಜ್ಯದ ಶಾಸಕಾಂಗ ಸಭೆಯಲ್ಲಿ ಶೇ.1ಕ್ಕಿಂತ ಕಡಿಮೆಯಿಲ್ಲದ ಮತಗಳನ್ನು ಪಡೆದುಕೊಂಡಿದ್ದರೆ, ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಚುನಾವಣಾ ಬಾಂಡ್‌ಗಳನ್ನು ಅರ್ಹ ರಾಜಕೀಯ ಪಕ್ಷವು ಅಧಿಕೃತ ಬ್ಯಾಂಕ್‌ನ ಖಾತೆಯ ಮೂಲಕ ಮಾತ್ರ ಎನ್‌ಕ್ಯಾಶ್ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಸುಪ್ರೀಂಕ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸ್ವೀಕರಿಸುವ ಚುನಾವಣಾ ಬಾಂಡ್‌ಗಳ ಯೋಜನೆಯ ಸಿಂಧುತ್ವ ಪ್ರಶ್ನಿಸುವ ಸಲ್ಲಿಸಲಾಗಿದೆ ಅರ್ಜಿಗಳ ವಿಚಾರಣೆ ನಡೆಸಿದೆ.
ಈ ಕುರಿತು ವಿಚಾರಣೆ ವೇಳೆ ಪಾರದರ್ಶಕ ಯೋಜನೆ ಅಥವಾ ಎಲ್ಲ ರಾಜಕೀಯ ಪಕ್ಷಗಳಿಗೆ ಸಮನಾದ ವೇದಿಕೆ ಹೊಂದಿರುವ ಯೋಜನೆಯೊಂದಿಗೆ ಸರ್ಕಾರ ಬರುವುದನ್ನು ತಡೆಯಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ನವೆಂಬರ್ 2ರಂದು ಅಂತಿಮ ವಿಚಾರಣೆ ನಡೆಸಿ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಇದನ್ನೂ ಓದಿ: 'ಪಾರದರ್ಶಕತೆ ಕೊರತೆ': ಚುನಾವಣಾ ಬಾಂಡ್‌ಗಳ 'ಆಯ್ದ ಅನಾಮಧೇಯತೆ' ಬಗ್ಗೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್