ಕೋಲ್ಕತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಯುರೋಪ್ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗಲಿರುವ ತಮ್ಮ ವಿದೇಶ ಪ್ರವಾಸದಲ್ಲಿ ಮಮತಾ ಬ್ಯಾನರ್ಜಿ ಮೊದಲು ದುಬೈಗೆ ಮತ್ತು ನಂತರ ಸ್ಪೇನ್ ನ ಮ್ಯಾಡ್ರಿಡ್ ಗೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿಗಳ ವಿದೇಶ ಪ್ರವಾಸಕ್ಕೆ ಬಹಳ ಹಿಂದೆಯೇ ಅನುಮೋದನೆ ಕೋರಲಾಗಿತ್ತು. ಅಂತಿಮವಾಗಿ ಗುರುವಾರ ಅನುಮೋದನೆ ಸಿಕ್ಕಿದೆ. ಸೆಪ್ಟೆಂಬರ್ 12 ರಿಂದ 23 ರವರೆಗೆ ಪ್ರವಾಸ ನಡೆಯಲಿದೆ. ಪಶ್ಚಿಮ ಬಂಗಾಳ ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಸೆಳೆಯಲು ಸಿಎಂ ಮಮತಾ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.
ಇದಕ್ಕೂ ಮೊದಲು ಅವರು 2018 ರಲ್ಲಿ ಚಿಕಾಗೋಗೆ ಭೇಟಿ ನೀಡಬೇಕಿತ್ತು. ಐದು ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರ ಚಿಕಾಗೋ ಸಮ್ಮೇಳನದ 125 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರನ್ನು ಚಿಕಾಗೋಗೆ ಆಹ್ವಾನಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಚಿಕಾಗೋ ಭೇಟಿಯನ್ನು ರದ್ದುಗೊಳಿಸಬೇಕಾಯಿತು. ಅಲ್ಲದೆ 2018 ರಲ್ಲಿಯೇ ಮಮತಾ ಬ್ಯಾನರ್ಜಿ ಕೊನೆಯ ಕ್ಷಣದಲ್ಲಿ ತಮ್ಮ ಚೀನಾ ಪ್ರವಾಸವನ್ನು ಕೂಡ ರದ್ದುಗೊಳಿಸಬೇಕಾಗಿ ಬಂದಿತ್ತು.
ಎರಡೂ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ನೀಡದ್ದರಿಂದಲೇ ಪ್ರವಾಸ ರದ್ದಾಗಿತ್ತು. ಹಾಗೆಯೇ 2021ರಲ್ಲಿ ಕೂಡ ಮಮತಾ ಬ್ಯಾನರ್ಜಿಯವರ ಉದ್ದೇಶಿತ ರೋಮ್ ಪ್ರವಾಸಕ್ಕೂ ಕೇಂದ್ರ ಅನುಮತಿ ನಿರಾಕರಿಸಿತ್ತು. ಆದರೆ ಈ ಬಾರಿ ಮಾತ್ರ ಕೇಂದ್ರ ಸರ್ಕಾರವು ಹೆಚ್ಚು ವಿಳಂಬವಿಲ್ಲದೆ ಅವರ ವಿದೇಶ ಪ್ರವಾಸಕ್ಕೆ ಅನುಮೋದನೆ ನೀಡಿದೆ.
ಲಭ್ಯವಿರುವ ವೇಳಾಪಟ್ಟಿಯ ಪ್ರಕಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೆಪ್ಟೆಂಬರ್ 12 ರಂದು ದುಬೈಗೆ ಆಗಮಿಸಲಿದ್ದು, ಅಲ್ಲಿಂದ ಅವರು ಸೆಪ್ಟೆಂಬರ್ 13 ರಂದು ಸ್ಪೇನ್ ಗೆ ತೆರಳಲಿದ್ದಾರೆ. ಸೆಪ್ಟೆಂಬರ್ 13 ರಿಂದ 20 ರವರೆಗೆ ಅವರು ಸ್ಪೇನ್ ನಲ್ಲಿರಲಿದ್ದಾರೆ. ಈ ಸಂದರ್ಭದಲ್ಲಿ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಸೇರಿದಂತೆ ಹಲವಾರು ನಗರಗಳಲ್ಲಿನ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ಸೆಪ್ಟೆಂಬರ್ 20 ರಂದು ಬಾರ್ಸಿಲೋನಾದಿಂದ ವಿಮಾನದಲ್ಲಿ ದುಬೈಗೆ ಅವರು ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಎರಡು ದಿನಗಳ ಕಾಲ ಅಲ್ಲಿಯೇ ತಂಗಿದ ನಂತರ ಸೆಪ್ಟೆಂಬರ್ 23 ರಂದು ದುಬೈನಿಂದ ಕೋಲ್ಕತ್ತಾಗೆ ಪ್ರಯಾಣಿಸಲಿದ್ದಾರೆ.
ಇದೇ ವರ್ಷದ ನವೆಂಬರ್ನಲ್ಲಿ ವಿಶ್ವ ಬಂಗಾಳ ವ್ಯಾಪಾರ ಸಮ್ಮೇಳನ (World Bengal Trade Conference) ನಡೆಯಲಿರುವುದರಿಂದ ಮಮತಾ ಬ್ಯಾನರ್ಜಿ ಅವರ ಈ ವರ್ಷದ ವಿದೇಶ ಭೇಟಿ ಮಹತ್ವದ್ದಾಗಿದೆ. ಸಿಎಂ ಮಮತಾ ರಾಜ್ಯದ ಅಭಿವೃದ್ಧಿಯನ್ನು ಈ ಎರಡು ದೇಶಗಳ ಜನರ ಮುಂದೆ ಪ್ರಸ್ತುತಪಡಿಸಲಿದ್ದಾರೆ ಮತ್ತು ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಮಾಡುವಂತೆ ಅಲ್ಲಿನ ಉದ್ಯಮಿಗಳನ್ನು ಆಹ್ವಾನಿಸಲಿದ್ದಾರೆ. ಇದರ ಜೊತೆಗೆ ವಿದೇಶಗಳಲ್ಲಿನ ಭಾರತೀಯ ಕೈಗಾರಿಕೋದ್ಯಮಿಗಳಿಗೂ ಅವರು ತಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಆಹ್ವಾನ ನೀಡಲಿದ್ದಾರೆ.
ಇದನ್ನೂ ಓದಿ : ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ