ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ಶರವೇಗದಲ್ಲಿ ಹರಡುತ್ತಿದ್ದು ಹೋಮ್ ಐಸೋಲೇಷನ್‌ನಲ್ಲಿರುವ ಕೊರೊನಾ ಸೋಂಕಿತರಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಗಳು ಹೀಗಿವೆ:
1. ಹೋಮ್ ಐಸೋಲೇಷನ್‌ನಲ್ಲಿ ಇರುವ ವ್ಯಕ್ತಿಯನ್ನು ಸೋಂಕು ತಗುಲಿದ ಬಳಿಕ, ಕನಿಷ್ಠ 7 ದಿನಗಳ ನಂತರ ಡಿಸ್ಚಾರ್ಜ್ ಎಂದು ಪರಿಗಣಿಸಬಹುದು. ಸತತ ಮೂರು ದಿನಗಳ ಕಾಲ ಜ್ವರ ಇಲ್ಲದಿದ್ದರೆ ಸೋಂಕಿನಿಂದ ಮುಕ್ತರಾಗಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು.
2. ಹೋಮ್ ಐಸೋಲೇಷನ್ ಅವಧಿ ಮುಗಿದ ನಂತರ ಮತ್ತೆ ಪರೀಕ್ಷೆ ಮಾಡಿಸುವ ಅಗತ್ಯ ಇಲ್ಲ. ರೋಗ ಲಕ್ಷಣ ರಹಿತವಾಗಿರುವವರು ಕೋವಿಡ್ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ.
3. ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸೋಂಕಿತ ಹೆಚ್ಚಿನ ಪ್ರಕರಣಗಳು ಲಕ್ಷಣರಹಿತವಾಗಿವೆ ಇಲ್ಲವೇ ಅತ್ಯಂತ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ. ಅಂತಹ ಪ್ರಕರಣಗಳು ಸಾಮಾನ್ಯವಾಗಿ ಕನಿಷ್ಠ ಚಿಕಿತ್ಸೆಯಲ್ಲಿ ಚೇತರಿಸಿಕೊಳ್ಳುತ್ತಾರೆ. ಇದಕ್ಕೆ ಅನುಗುಣವಾಗಿ ಸರಿಯಾದ ವೈದ್ಯಕೀಯ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯನ್ನು ಮನೆಯಲ್ಲಿಯೇ ನಿರ್ವಹಿಸಬಹುದು ಎಂದು ಹೇಳಿದೆ.
4. ಸೋಂಕಿತರಿಗೆ ಸೌಮ್ಯ ಅಥವಾ ಲಕ್ಷಣರಹಿತ ಪ್ರಕರಣವೇ ಎಂದು ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಬೇಕು. ಹೆಚ್ಚುವರಿಯಾಗಿ ಪರೀಕ್ಷೆ, ಕ್ಲಿನಿಕಲ್ ನಿರ್ವಹಣೆಗೆ ಸಂಬಂಧಿಸಿದ ಮಾರ್ಗದರ್ಶನ, ಆಸ್ಪತ್ರೆಯ ಬೆಡ್‌ಗಳ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನಕ್ಕಾಗಿ ಜಿಲ್ಲೆ/ಉಪ ಜಿಲ್ಲಾ ಮಟ್ಟದಲ್ಲಿ ಗೊತ್ತುಪಡಿಸಿದ ನಿಯಂತ್ರಣ ಕೊಠಡಿಯ ಸಂಪರ್ಕ ಸಂಖ್ಯೆಯನ್ನು ಒದಗಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Weekend Curfew: ಸಾರಿಗೆ ಸೇವೆಯಲ್ಲಿ ಬದಲಾವಣೆ.. ಇಲ್ಲಿದೆ ಮಾಹಿತಿ