ತೆಲಂಗಾಣ: ರಾಜ್ಯದಲ್ಲಿ ಪುರುಷ ಮತ್ತು ಮಹಿಳಾ ಮತದಾರರು ಬಹುತೇಕ ಸಮನಾಗಿರುವುದು ಉತ್ತಮ ಬೆಳವಣಿಗೆ ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು ರಾಜ್ಯಕ್ಕೆ ಇಂದು ಭೇಟಿ ನೀಡಿದ್ದ ಅವರು ವಿವಿಧ ಅಧಿಕಾರಿಗಳ ಜೊತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ತೆಲಂಗಾಣದಲ್ಲಿ ಇದೇ ಮೊದಲ ಪ್ರಥಮ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ. ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಪ್ರಚೋದನೆರಹಿತ ಚುನಾವಣೆ ನಡೆಸಲು ಆಯೋಗ ಸಂಪೂರ್ಣ ಬದ್ಧವಾಗಿದೆ ಎಂದು ಅವರು ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ 22 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಅಳಿಸಲಾಗಿದೆ. ಒಂದೇ ಒಂದು ಹೆಸರನ್ನು ಏಕಪಕ್ಷೀಯವಾಗಿ ಅಳಿಸಿ ಹಾಕಿಲ್ಲ. ಫಾರಂ ಪಡೆದ ನಂತರವೇ ಆ ಹೆಸರುಗಳನ್ನು ಅಳಿಸಿದ್ದೇವೆ. ಬುಧವಾರ ಮತದಾರರ ನೂತನ ಪಟ್ಟಿ ಬಿಡುಗಡೆಯಾಗಿದ್ದು ಯುವ ಮತದಾರರ ಸಂಖ್ಯೆ 8 ಲಕ್ಷ ದಾಟಿರುವುದು ಶ್ಲಾಘನೀಯ ಎಂದರು.
ನಾಲ್ಕು ಬುಡಕಟ್ಟುಗಳಲ್ಲಿ ಪ್ರತಿಶತ 100ರಷ್ಟು ಮತದಾರರ ನೋಂದಣಿ ಮಾಡಲಾಗಿದೆ. 35,356 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಯಲ್ಲಿ ಸರಾಸರಿ 897 ಮತದಾರರಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದ್ದು ಮತದಾರರ ಪಟ್ಟಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಕೆಲವರು ಹೇಳಿಕೊಂಡಿರುವುದಾಗಿ ರಾಜೀವ್ ಕುಮಾರ್ ತಿಳಿಸಿದರು.
ಜುಲೈ ನಂತರ ಅರ್ಜಿ ಸಲ್ಲಿಸಿದ 2.21 ಲಕ್ಷ ಯುವಕರಿಗೆ ಮತದಾನದ ಹಕ್ಕು ನೀಡಲಾಗಿದೆ. 18-19 ವಯೋಮಾನದ 3.45 ಲಕ್ಷ ಯುವತಿಯರಿದ್ದಾರೆ. 66 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಒಟ್ಟು 3,17,17,389 ಮತದಾರರಿದ್ದು ಈ ಪೈಕಿ 1,58,71,493 ಪುರುಷ ಮತದಾರರು, 1,58,43,339 ಮಹಿಳಾ ಮತದಾರರಿದ್ದಾರೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಮತದಾರರ ಪಟ್ಟಿಗೆ ಹೋಲಿಸಿದರೆ 10 ತಿಂಗಳ ಅವಧಿಯಲ್ಲಿ ಮತದಾರರ ಸಂಖ್ಯೆ ಹೆಚ್ಚಳವಾಗಿದೆ ಎಂದರು.
ಆನ್‌ಲೈನ್ ನಗದು ವರ್ಗಾವಣೆ ಸೇರಿದಂತೆ ಹಣ ಹಂಚಿಕೆ, ಮದ್ಯ ಮತ್ತು ಉಡುಗೊರೆಗಳ ನೀಡುವಿಕೆಯ ಮೇಲೆ ವಿಶೇಷ ನಿಗಾ ಇಡಲಾಗುವುದು. ಮುಕ್ತ ಮತ್ತು ಪಾರದರ್ಶಕ ಚುನಾವಣೆಗೆ ಆಯೋಗ ಸಿದ್ಧವಿದೆ. ಚುನಾವಣೆ ವೇಳೆ ನಡೆಯುವ ಅವ್ಯವಹಾರಗಳ ಬಗ್ಗೆ ದೂರು ನೀಡಬಹುದು. ದೂರು ಕೇಳಿ ಬಂದ 100 ನಿಮಿಷದಲ್ಲಿ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಕ್ರಮಗಳ ಬಗ್ಗೆ ನಾಗರಿಕರು ದೂರು ನೀಡಬಹುದು. ದೂರು ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ರಾಜೀವ್ ಕುಮಾರ್ ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗವು ಬುಧವಾರ ರಾಜ್ಯದ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಒಟ್ಟು 3,17,17,389 ಮತದಾರರಿದ್ದಾರೆ ಎಂದು ಬಹಿರಂಗಪಡಿಸಿದೆ. ಈ ಪೈಕಿ ಪುರುಷ ಮತದಾರರು 1,58,71,493 ಮತ್ತು ಮಹಿಳಾ ಮತದಾರರು 1,58,43,339 ಇದ್ದಾರೆ. ಇವರಲ್ಲದೆ 2,557 ತೃತೀಯಲಿಂಗಿ ಮತದಾರರಿದ್ದಾರೆ. ಈ ವರ್ಷದ ಜನವರಿಗೆ ಹೋಲಿಸಿದರೆ ಮತದಾರರ ಸಂಖ್ಯೆಯಲ್ಲಿ ಶೇ.5.8ರಷ್ಟು ಹೆಚ್ಚಳವಾಗಿದೆ. ಲಿಂಗ ಅನುಪಾತವು 998:1000 ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ: ಉತ್ತರ ಪ್ರದೇಶದ ಮುಸ್ಲಿಮರು ನಮ್ಮನ್ನು ಬೆಂಬಲಿಸುತ್ತಾರೆ, ಎಲ್ಲ 80 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಪಕ್ಷ ಸಿದ್ಧ: ಕಾಂಗ್ರೆಸ್