ನವದೆಹಲಿ: ಜಾರ್ಖಂಡ್ನ ಧನಾಬಾದ್ ಜಿಲ್ಲೆಯ ಜಡ್ಜ್ ಉತ್ತಮ್ ಆನಂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಬುಧವಾರ ದೂರು ದಾಖಲಿಸಿಕೊಂಡಿದ್ದು, ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಸಿಬಿಐ ತನಿಖೆ ನಡೆಸುವಂತೆ ಜಾರ್ಖಂಡ್ ಸರ್ಕಾರ ಮನವಿ ಮಾಡಿತ್ತು. ಈ ನಂತರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಇದಕ್ಕೂ ಮೊದಲು ಧನಾಬಾದ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.
ಜುಲೈ 28ರಂದು, ಧನಾಬಾದ್‌ನ ಮ್ಯಾಜಿಸ್ಟ್ರೇಟ್ ಕಾಲೋನಿಯ ಬಳಿ ಆಟೋ ರಿಕ್ಷಾ ಮೂಲಕ ಡಿಕ್ಕಿ ಹೊಡೆಯಿಸಿ ಕೊಲ್ಲಲಾಗಿತ್ತು. ಬಳಿಕ ಹತ್ಯೆಯಲ್ಲಿ ಭಾಗಿಯಾದ ಇಬ್ಬರನ್ನು ಬಂಧಿಸಲಾಗಿದ್ದು, ಆಟೋ ರಿಕ್ಷಾ ಜಪ್ತಿ ಮಾಡಲಾಗಿತ್ತು.
ಆರೋಪಿಗಳಾದ ಲಖನ್ ಕುಮಾರ್ ವರ್ಮಾ ಮತ್ತು ರಾಹುಲ್ ವರ್ಮಾ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಇನ್ಸ್‌ಪೆಕ್ಟರ್ ಜನರಲ್ ಅಮೋಲ್ ವಿನುಕಾಂತ್ ಹೋಮ್ಕರ್ ಹೇಳಿದ್ದು, ಈಗ ಮತ್ತಷ್ಟು ತನಿಖೆಗಾಗಿ ಸಿಬಿಐ ದೂರು ದಾಖಲಿಸಿಕೊಂಡಿದೆ.
ಪ್ರಕರಣದ ಮತ್ತಷ್ಟು ವಿವರ:
ಧನಾಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉತ್ತಮ್ ಆನಂದ್ ಜುಲೈ 28ರಂದು ಬೆಳಗ್ಗೆ ರಸ್ತೆ ಬದಿ ಜಾಗಿಂಗ್ ಮಾಡುತ್ತಿದ್ದ ವೇಳೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಅದಾದ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.
ಜಡ್ಜ್ ಸಾವು ಅಪಘಾತವೋ ಅಥವಾ ಕೊಲೆಯೋ ಎಂಬ ಅನುಮಾನಗಳು ಮೊದಲಿಗೆ ಮೂಡಿದ್ದವು. ಸಿಸಿಟಿವಿಯಲ್ಲಿನ ದೃಶ್ಯಗಳನ್ನು ಪರಿಶೀಲನೆ ನಡೆಸಿದ ನಂತರ ಇದೊಂದು ಕೊಲೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುವಂತಿತ್ತು.
ಆಟೋ ಚಾಲಕ ಮತ್ತು ಮತ್ತೋರ್ವ ವ್ಯಕ್ತಿ ಇದೊಂದು ಕೊಲೆ ಎಂದು ಒಪ್ಪಿಕೊಂಡಿದ್ದು, ಇನ್ನೂ ಹಲವು ಅನುಮಾನಗಳು ಬಂದ ಹಿನ್ನೆಲೆಯಲ್ಲಿ ಜಾರ್ಖಂಡ್ ಬಾರ್ ಅಸೋಸಿಯೇಷನ್ ಪ್ರಕರಣವನ್ನು ಸಿಬಿಐ ವಹಿಸಿಕೊಳ್ಳಬೇಕೆಂದು ಒತ್ತಾಯಿಸಿತ್ತು. ಒತ್ತಡ ತೀವ್ರವಾದಂತೆ ಜಾರ್ಖಂಡ್ ಸರ್ಕಾರ ಸಿಬಿಐ ತನಿಖೆಗೆ ಮನವಿ ಮಾಡಿದ್ದು, ಈಗ ಸಿಬಿಐ ದೂರು ದಾಖಲಿಸಿಕೊಂಡಿದೆ.
ಇದನ್ನೂ ಓದಿ: Judge Death Case: ಆಟೋ ಚಾಲಕ ಅರೆಸ್ಟ್.. ಸಾವಿನ ಸುತ್ತ ಅನುಮಾನಗಳ ಹುತ್ತ