ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಈ ಹಗರಣದ "ಅತಿದೊಡ್ಡ ಫಲಾನುಭವಿ" ಹಾಗೂ "ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವ ಮಮತಾ ಬ್ಯಾನರ್ಜಿ ಅವರನ್ನು ಬಂಧಿಸಲು ಸಿಬಿಐ ಹಿಂದೇಟು ಹಾಕುತ್ತದೆ ಎಂದು ಸುವೇಂದು ಅಧಿಕಾರಿ ಪ್ರಶ್ನಿಸಿದರು. ಬ್ಯಾನರ್ಜಿ ಅವರ ವಿರುದ್ಧ ಕ್ರಮ ಕೈಗೊಳ್ಳು ಈ ಸಂಸ್ಥೆಯು ಹಿಂಜರಿಯುತ್ತಿದೆಯೇ ಎಂದು ಅನುಮಾನ ವ್ಯಕ್ತಪಡಿದರು.
ಭ್ರಷ್ಟಾಚಾರ ಸುಳಿಯಲ್ಲಿ ಸಿಲುಕಿದ ರಾಜ್ಯ: ಪಂಚಾಯತ್ ಚುನಾವಣೆಗೆ ಮುನ್ನ ಈ ವಿಷಯವನ್ನು ಪ್ರಸ್ತಾಪಿಸಿದ ಸುವೇಂದು ಅಧಿಕಾರಿ, ನಿಧಾನಗತಿಯ ತನಿಖೆಯಿಂದ ಪಶ್ಚಿಮ ಬಂಗಾಳದ ಜನರು ಬೇಸರಗೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ‘ರಾಜ್ಯವು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಸುವೇಂದು ಅಧಿಕಾರಿಯಿಂದ ಹಲವು ಪ್ರಶ್ನೆಗಳು: ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಹಗರಣದ ಅತಿದೊಡ್ಡ ಫಲಾನುಭವಿಯಾದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಸುವೇಂದು ಅಧಿಕಾರಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಮೂರು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂಬ ಕಾರಣಕ್ಕೆ ಸಿಬಿಐ ಸಂಸ್ಥೆ ಹಿಂಜರಿಯುತ್ತಿದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅವರು ಉನ್ನತ ಸ್ಥಾನದಲ್ಲಿರುವುದನ್ನು ಗಮನಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳು ಹಿಂಜರಿಯುತ್ತಿದೆಯೇ? ಆದರೆ, ಈ ತನಿಖೆ ನಡೆಸಲು ಹಿಂದೇಟು ಹಾಕಲು ಸಿಬಿಐಗೆ ಇದು ಪ್ರಾಥಮಿಕ ಕಾರಣವೇ ಅಲ್ಲ. ಆದ್ದರಿಂದ ಉನ್ನತ ಮತ್ತು ಪ್ರಬಲರ ಸ್ಥಾನ ಹೊಂದಿವವರ ಅವರ ವಿರುದ್ಧ ಸೂಕ್ತ ಕ್ರಮವಹಿಸಿ, ನ್ಯಾಯ ಒದಗಿಸಲಬೇಕು'' ಎಂದು ಪತ್ರದಲ್ಲಿ ಬರೆದಿದ್ದಾರೆ.
ಸಿಬಿಐನಿಂದ ಪ್ರಮುಖ ವಿಷಯ ಬಹಿರಂಗ: ಶಾರದಾ ಚಿಟ್ ಫಂಡ್‌ನೊಂದಿಗೆ ಬ್ಯಾನರ್ಜಿಯವರ ಒಡನಾಟವು ಯುಪಿಎ-2 ಸರ್ಕಾರದಲ್ಲಿ, ಕೇಂದ್ರ ರೈಲ್ವೆ ಸಚಿವರಾಗಿದ್ದ ಸಮಯಕ್ಕಿಂತಲೂ ಹಿಂದಿನದು ಎಂದು ಅವರು, ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್ಸಿಟಿಸಿ) ಮತ್ತು ಶಾರದಾ ಗ್ರೂಪ್ ನಡುವಿನ ಸಂಪರ್ಕವನ್ನು ಸಿಬಿಐ ಬಹಿರಂಗಪಡಿಸಿದೆ ಎಂದು ಅವರು ಬರೆದಿದ್ದಾರೆ.
ವರ್ಣಚಿತ್ರಗಳ ಮಾರಾಟದಿಂದ 3.939 ಕೋಟಿ ರೂ. ಗಳಿಕೆ: 2010ರಲ್ಲಿ ಪ್ರವಾಸೋದ್ಯಮ ಯೋಜನೆಗೆ ಸಂಬಂಧಿಸಿದಂತೆ ಇಬ್ಬರೂ ಒಪ್ಪಂದಕ್ಕೆ ಸಹಿ ಹಾಕಿದ್ದರು. ನಂತರ ಈ ಗ್ರೂಪ್ ಐಆರ್ಸಿಟಿಸಿಗಾಗಿ ಪ್ಯಾಕೇಜ್ ಪ್ರವಾಸಗಳನ್ನು ಆಯೋಜಿಸಿತ್ತು. ಶಾರದಾ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್. 2011ರಲ್ಲಿ ಪಕ್ಷವು ಅಧಿಕಾರಕ್ಕೆ ಬರುವ ಮೊದಲು ತೃಣಮೂಲ ಕಾಂಗ್ರೆಸ್‌ಗೆ ಸುದೀಪ್ತ ಸೇನ್ ಹಣಕಾಸಿನ ನೆರವು ನೀಡಿದ್ದರು ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. 2014ರಲ್ಲಿ ಸೇನ್ ಅವರು ಬ್ಯಾನರ್ಜಿ ಅವರ ವರ್ಣಚಿತ್ರಗಳನ್ನು 1.8 ಕೋಟಿ ರೂ.ಗೆ ಖರೀದಿಸಿದ್ದರು ಎಂದು ವರದಿಯಾಗಿದೆ. ಇದು 2011-12ರ ಟಿಎಂಸಿಯ ಆದಾಯದ ಮಾಹಿತಿಯಿಂದ ದೃಢೀಕರಿಸಲ್ಪಟ್ಟಿದೆ. ವರ್ಣಚಿತ್ರಗಳ ಮಾರಾಟದಿಂದ ಒಟ್ಟು 3.939 ಕೋಟಿ ರೂ. ಆದಾಯ ಗಳಿಕೆಯಾಗಿತ್ತು. ಇದು ಅಕ್ರಮ ಹಣ ವರ್ಗಾವಣೆಯ ಸ್ಪಷ್ಟ ಪ್ರಕರಣವಾಗಿದೆ ಎಂದು ಅವರು ಆರೋಪಿಸಿದರು.
2014ಕ್ಕೆ ಸಿಬಿಐಗೆ ಕೇಸ್ ವರ್ಗಾವಣೆ: "ಶಾರದಾ ಚಿಟ್ ಫಂಡ್‌ನೊಂದಿಗೆ ಬ್ಯಾನರ್ಜಿಯವರು ಉತ್ತಮ ಸಂಪರ್ಕ ಹೊಂದಿದ್ದರು. ಆದರೆ, ಮಮತಾ ಬ್ಯಾನರ್ಜಿಯ ಬಗ್ಗೆ ತನಿಖೆ ನಡೆಸಲು ಸಿಬಿಐ ಏಕೆ ವಿಳಂಬ ಮಾಡುತ್ತಿದೆ. ಪ್ರಧಾನ ತನಿಖಾ ಸಂಸ್ಥೆಯು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಪಶ್ಚಿಮ ಬಂಗಾಳದ ಜನರ ನಂಬಿಕೆಗೆ ಧಕ್ಕೆ ಉಂಟು ಮಾಡಿದೆ ಎಂದು ಮೋದಿಗೆ ಪತ್ರದಲ್ಲಿ ಅವರು ಪ್ರಶ್ನಿಸಿದ್ದಾರೆ. 2014ರಲ್ಲಿ ಸುಪ್ರೀಂ ಕೋರ್ಟ್ ಶಾರದಾ ಗ್ರೂಪ್ ಆಫ್ ಕಂಪನಿಗಳ ವಿರುದ್ಧ ಬಂಗಾಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತ್ತು.
ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ಮಾ.20ರವರೆಗೆ ಸಿಸೋಡಿಯಾರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್