ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಸಮರ ಮುಂದುವರೆಸಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ)ವು ದೇಶದ ಎಲ್ಲ ಭ್ರಷ್ಟರನ್ನು ಒಂದು ಪಕ್ಷಕ್ಕೆ ಕರೆತಂದಿವೆ ಎಂದು ಅವರು ಆರೋಪ ಮಾಡಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇಡಿ ಮತ್ತು ಸಿಬಿಐ ದೇಶದ ಎಲ್ಲಾ ಭ್ರಷ್ಟರನ್ನು ಒಂದು ಪಕ್ಷಕ್ಕೆ ಕರೆತಂದಿವೆ. ಈ ತನಿಖಾ ಸಂಸ್ಥೆಗಳು ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸುತ್ತವೆ. ನಾಯಕರ ತಲೆ ಮೇಲೆ ಬಂದೂಕು ಇಟ್ಟು ಜೈಲಿಗೆ ಹೋಗಬೇಕೋ ಅಥವಾ ಬಿಜೆಪಿಗೆ ಸೇರುತ್ತೀರೋ ಎಂದು ಕೇಳುತ್ತಾರೆ ಎಂದರು.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಮೋದಿಜಿ ಅವರು ಪ್ರಧಾನಿ ಆಗದ ದಿನ ಭಾರತ, 'ಭ್ರಷ್ಟಾಚಾರ ಮುಕ್ತ ಭಾರತ' ಆಗಲಿದೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆದ ದಿನ ಮತ್ತು ಬಿಜೆಪಿ ನಾಯಕರನ್ನು ಕಂಬಿ ಹಿಂದೆ ಹಾಕುವ ದಿನ ಭಾರತ ಭ್ರಷ್ಟಾಚಾರ ಮುಕ್ತವಾಗಲಿದೆ ಎಂದು ಹೇಳಿದರು. ಅಲ್ಲದೇ ನಮ್ಮ ಪಕ್ಷದ ಕೆಲವು ಶಾಸಕರಿಗೆ ಸಿಬಿಐ ಮತ್ತು ಇಡಿ ದಾಳಿಗಳ ಬೆದರಿಕೆ ಇದೆ. ಆದರೆ ಶಾಸಕರು ಯಾವುದಕ್ಕೂ ಹೆದರಲ್ಲ ಎಂದು ಹೇಳಿದರು.
ಈ ಹಿಂದೆ, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದ ಕೇಜ್ರಿವಾಲ್, "ಕಾಂಗ್ರೆಸ್ ಸರ್ಕಾರ 75 ವರ್ಷಗಳಲ್ಲಿ ಲೂಟಿ ಮಾಡಿದ್ದಕ್ಕಿಂತ ಬಿಜೆಪಿ ಸರ್ಕಾರ ಏಳು ವರ್ಷಗಳಲ್ಲಿ ಹೆಚ್ಚು ಲೂಟಿ ಮಾಡಿದೆ" ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಟೀಕಿಸಲು ಅದಾನಿ ವಿಷಯವನ್ನು ಪ್ರಸ್ತಾಪಿಸಿದ ಅವರು, "ಆರು ವಿಮಾನ ನಿಲ್ದಾಣಗಳನ್ನು ಅದಾನಿ ಗುಂಪಿಗೆ ನೀಡಲಾಗಿದೆ. ಪ್ರಧಾನಿ ಮೋದಿ ಕಡಿಮೆ ಶಿಕ್ಷಣ ಪಡೆದಿದ್ದಾರೆ. ಅವರು ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ಕಳವಳಕಾರಿ ಸಂಗತಿ. ಅದಾನಿ ಜೊತೆಗೆ ಪ್ರಧಾನಿ ಮೋದಿ ಯಾವ ರೀತಿಯ ಸಂಬಂಧ ಹೊಂದಿದ್ದಾರೆ" ಎಂದು ಪ್ರಶ್ನಿಸಿದ್ದರು.
ಪಿಎಂ ಮೋದಿ ಎಷ್ಟು ಸ್ವಾರ್ಥಿ ಎಂದರೆ ಅದಾನಿಯೊಂದಿಗೆ ಸ್ನೇಹವಿಲ್ಲದಿದ್ದರೆ ಅವರು ಇಷ್ಟೆಲ್ಲಾ ಮಾಡುತ್ತಿರಲಿಲ್ಲ. ಮೋದಿ ಅವರು ಅದಾನಿಯನ್ನು ಎಲ್ಲಾ ತನಿಖಾ ಸಂಸ್ಥೆಗಳಿಂದ ರಕ್ಷಿಸುವಲ್ಲಿ ನಿರತರಾಗಿದ್ದಾರೆ. ಅದಾನಿಯನ್ನು ಉಳಿಸಲು ಎಲ್ಲಾ ರೀತಿಯಲ್ಲೂ ಸಿದ್ಧರಾಗಿದ್ದಾರೆ. ಸಿಬಿಐ ಮತ್ತು ಇಡಿಯಂತಹ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದರು.
ಮಾರ್ಚ್ 13ರಂದು ಸಂಸತ್ತಿನ ಎರಡನೇ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಹಿಂಡೆನ್‌ಬರ್ಗ್-ಅದಾನಿ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರೆಸಿವೆ. ಲೋಕಸಭೆ ಮತ್ತು ವಿಧಾನಸಭೆಯ ಕಲಾಪಗಳಿಗೆ ಅಡ್ಡಿ ಉಂಟಾಗುತ್ತಿದೆ. ಈ ಪ್ರತಿಭಟನೆಗೆ ಆಪ್ ಸಂಸದರು ಕೂಡ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅದಾನಿ ವಿವಾದ ಪ್ರಸ್ತಾಪಿಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಕೇಜ್ರಿವಾಲ್ ತೀವ್ರ ವಾಗ್ದಾಳಿ..