ನವದೆಹಲಿ: ನಾರದಾ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ ಟಿಎಂಸಿಯ ನಾಲ್ವರು ಮುಖಂಡರ ಗೃಹ ಬಂಧನಕ್ಕೆ ಅವಕಾಶ ನೀಡಿರುವ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಇಂದು (ಮೇ 24 ಸೋಮವಾರ) ಹೈಕೋರ್ಟ್ನ ವಿಸ್ತೃತ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯಲಿದ್ದು, ಇದನ್ನು ಮುಂದೂಡುವಂತೆ ಕೇಂದ್ರ ತನಿಖಾ ದಳ (ಸಿಬಿಐ) ಸುಪ್ರೀಂಕೋರ್ಟ್ ಅನ್ನು ಕೋರಿದೆ.
ಕೋಲ್ಕತ್ತಾ ಹೈಕೋರ್ಟ್ ಮೇ 21 ರಂದು ನೀಡಿದ ಆದೇಶದಲ್ಲಿ, ನಾರದಾ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರು ಮಂತ್ರಿಗಳು ಸೇರಿದಂತೆ ನಾಲ್ವರು ಟಿಎಂಸಿ ಮುಖಂಡರನ್ನು ಗೃಹ ಬಂಧನದಲ್ಲಿಡಲು ಅವಕಾಶ ನೀಡಿತ್ತು. ಅಲ್ಲದೆ ಮುಂದಿನ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು.
ಇದನ್ನೂ ಓದಿ: ನಾರದಾ ವಿವಾದ: ಟಿಎಂಸಿ ನಾಯಕರ ಜಾಮೀನಿಗೆ ಕೋಲ್ಕತ್ತಾ ಹೈಕೋರ್ಟ್ ತಡೆ
ನಾರದಾ ಲಂಚ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿಯ ಸಂಪುಟ ಸದಸ್ಯರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಮತ್ತು ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಮಾಜಿ ಶಾಸಕ ಸೋವನ್ ಚಟರ್ಜಿ ಸೇರಿದಂತೆ ಪಶ್ಚಿಮ ಬಂಗಾಳದ ನಾಲ್ವರು ರಾಜಕಾರಣಿಗಳು ಆರೋಪಿಗಳಾಗಿದ್ದಾರೆ.
ಏನಿದು ನಾರದಾ ಪ್ರಕರಣ?
2016ರ ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ನಾರದ ಎಂಬ ಸುದ್ದಿವಾಹಿನಿ ನಡೆಸಿದ ಸ್ಟಿಂಗ್ (ಮಾರುವೇಷದ ಕಾರ್ಯಾಚರಣೆ) ಆಪರೇಷನ್ನಲ್ಲಿ ಟಿಎಂಸಿ ನಾಯಕರು ಲಂಚ ತೆಗೆದುಕೊಳ್ಳುತ್ತಿರುವುದು ಬಯಲಾಗಿತ್ತು. ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. 2017ರ ಮಾರ್ಚ್ನಲ್ಲಿ ಕೋಲ್ಕತ್ತಾ ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ಸುವೇಂದು ಬಚಾವ್
ನಾರದಾ ನ್ಯೂಸ್ ಚಾನೆಲ್ ನಡೆಸಿದ ಈ ಕಾರ್ಯಾಚರಣೆಯಲ್ಲಿ 12 ಮಂದಿ ಟಿಎಂಸಿ ಮಂತ್ರಿಗಳು, ಮುಖಂಡರು ಮತ್ತು ಓರ್ವ ಐಪಿಎಸ್ ಅಧಿಕಾರಿ ಲಂಚ ಸ್ವೀಕರಿಸುತ್ತಿರುವ ವಿಚಾರ ಬಟಾಬಯಲಾಗಿತ್ತು. ಈ ಪ್ರಕರಣದಲ್ಲಿ ಟಿಎಂಸಿಯಿಂದ ಬಿಜೆಪಿ ಸೇರಿದ ಸುವೇಂದು ಅಧಿಕಾರಿ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಸುವೇಂದು ಬಿಜೆಪಿ ಸೇರಿದ ಬಳಿಕ ಅವರ ಹೆಸರು ಪ್ರಕರಣದಿಂದ ಮಾಯವಾಗಿದೆ. ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಟಿಎಂಸಿಯ ನಾಲ್ವರು ನಾಯಕರನ್ನು ಬಂಧಿಸಿತ್ತು.